ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ-ಧರೆಗುರುಳಿದ 30ಕ್ಕೂ ಹೆಚ್ಚು ಮರಗಳು, ವಿದ್ಯುತ್ ಕಂಬಗಳು

ಬೆಂಗಳೂರು: ಕಳೆದ ಮೂರು ದಿನಗಳಿಂದ ವರುಣದೇವ ರಾಜ್ಯದಲ್ಲೆಡೆ ಅಬ್ಬರಿಸುತ್ತಿದ್ದಾನೆ. ಬುಧವಾರ ಸಂಜೆ ಆರಂಭವಾದ ಬಿರುಗಾಳಿ ಸಹಿತ ಮಳೆ ಜನಜೀವನ್ನು ಅಸ್ತವ್ಯಸ್ಥವನ್ನಾಗಿ ಮಾಡಿತು. ನಗರದ ವಿದ್ಯಾರಣ್ಯಪುರ, ಎಚ್‍ಎಂ.ಟಿ ಲೇಔಟ್, ಯಲಹಂಕ ನ್ಯೂಟೌನ್, ಜ್ಯೂಡಿಷಿಯಲ್ ಲೇಔಟ್ ಸುತ್ತ-ಮುತ್ತ ಸೇರಿದಂತೆ ಬಹುತೇಕ ಕಡೆಗಳಲ್ಲಿ ಭಾರಿ ಗಾತ್ರದ ಮರಗಳು ಗಾಳಿಯ ರಭಸಕ್ಕೆ ನೆಲ ಕಚ್ಚಿವೆ. ಕೆಲವೆಡೆ ಮನೆಗಳ ಮೇಲೆ ಕಾಂಪೌಂಡ್‍ಗಳ ಮೇಲೆ ಉರುಳಿಬಿದ್ದಿದೆ.

ಬಿರುಗಾಳಿಗೆ ವಿದ್ಯುತ್ ಕಂಬಗಳು ಬಿದ್ದಿರುವದರಿಂದ ಇಡೀ ರಾತ್ರಿ ವಿದ್ಯಾರಣ್ಯಪುರ ಹಾಗೂ ಸುತ್ತ-ಮುತ್ತಲ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಅರಣ್ಯಘಟಕದ ಸಿಬ್ಬಂದಿ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದ್ರು. ಆದ್ರೆ ಕತ್ತಲಿದ್ದ ಪರಿಣಾಮ ಕಡಿತಗೊಂಡ ವಿದ್ಯುತ್ ತಂತಿ ಮರುಜೋಡಣೆ ಸಾಧ್ಯವಾಗ್ಲಿಲ್ಲ. ಅಷ್ಟಾಗಿ ಮಳೆ ಇಲ್ಲದಿದ್ದರೂ ಏಕಾಏಕಿಯಾಗಿ ಬಂದ ಭಾರಿ ರಭಸದ ಗಾಳಿ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ.

ಬೆಂಗಳೂರು ಹೊರವಲಯ ಆನೇಕಲ್ ನಲ್ಲಿಯೂ ಸಹ ಗಾಳಿ ಸಹಿತ ಮಳೆಯಾಗಿದೆ. ಬೀಸಿದ ಭಾರಿ ಬಿರುಗಾಳಿಗೆ ಮನೆಯ ಮೇಲ್ಛಾವಣಿ ಬಿದ್ದು ಒಂದು ಕಾರು ಜಖಂಗೊಂಡಿದ್ದು, ಹತ್ತಾರು ವಿದ್ಯುತ್ ಕಂಬಗಳು, ಮರಗಳು ಸೇರಿದಂತೆ ಮೊಬೈಲ್ ಟವರ್ ಧರೆಗುರುಳಿವೆ. ನೆಲಮಂಗಲ ಸುತ್ತಮುತ್ತ ಸ್ವಲ್ಪ ಸಮಯದ ಕಾಲ ಭಾರಿ ಬಿರುಗಾಳಿ ಬೀಸಿದ್ದು, ಗಾಳಿಯ ರಭಸಕ್ಕೆ ಕಾರು ಜಖಂಗೊಂಡಿದೆ. ಶಿವನಪುರದಲ್ಲಿ ಏರ್‍ಟೆಲ್ ಮೊಬೈಲ್ ಟವರ್ ಮುರಿದು ಬಿದ್ದಿದೆ. ಇತ್ತ ದೊಂಬರಹಳ್ಳಿಯಲ್ಲಿ 100 ಕೆವಿ ಟ್ರಾನ್ಸ್ ಫಾರ್ಮರ್ ನೆಲಕ್ಕೆ ಅಪ್ಪಳಿಸಿದ್ದು, ಕುದುರುಗೆರೆ ಗುಡ್ಡದಹಳ್ಳಿಯಲ್ಲಿ ಆರು ವಿದ್ಯುತ್ ಕಂಬ ಸೇರಿದಂತೆ ಅನೇಕ ಬೃಹತ್ ಮರಗಳು ಧರೆಗುರುಳಿವೆ.

ಕೋಲಾರ ಜಿಲ್ಲೆಯ ಮುಳಬಾಗಿಲು, ಬಂಗಾರಪೇಟೆ ಸೇರಿದಂತೆ ವಿವಿಧೆಡೆ ವರುಣನ ಆರ್ಭಟ ಜೋರಾಗಿದ್ದು, ಆಲಿಕಲ್ಲು ಮಳೆಗೆ ಸಾಕಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ. ಅರಹಳ್ಳಿ, ಮೂರಾಂಡಹಳ್ಳಿ ಭಾಗದಲ್ಲಿ ನರ್ಸರಿ ಫಾರಂ, ಸೇರಿದಂತೆ ಮನೆಯ ಮೇಲ್ಛಾವಣಿಗಳು ಗಾಳಿ ಮಳೆಗೆ ಹಾರಿ ಹೋಗಿದ್ದು, ಬೃಹತ್ ಗಾತ್ರದ ಮರಗಳು ನೆಲಕಚ್ಚಿವೆ. ಆಲಿಕಲ್ಲು ಮಳೆಯಿಂದ ಟೊಮೊಟೋ ಸೇರಿದಂತೆ ಲಕ್ಷಾಂತರ ರೂಪಾಯಿ ತೋಟಗಾರಿಕಾ ಬೆಳೆಗಳು ನಾಶವಾಗಿವೆ.

Comments

Leave a Reply

Your email address will not be published. Required fields are marked *