4 ವರ್ಷದ ಬಳಿಕ ಪಾಲಾರ್‌ ಜಲಾಶಯ ಭರ್ತಿ- ಬರದ ನಾಡು ಕೋಲಾರದಲ್ಲಿ ಭಾರೀ ಮಳೆ

ಕೋಲಾರ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿದ ಜೋರು ಮಳೆಯಿಂದಾಗಿ ರಸ್ತೆಗಳು ಸೇರಿದಂತೆ ರೈತರು ಬೆಳೆದ ನೂರಾರು ಎಕರೆ ಬೆಳೆಗಳು ಸಂಪೂರ್ಣ ಜಲಾವೃತವಾಗಿದೆ. ತಗ್ಗು ಪ್ರದೇಶದಲ್ಲಿರುವ ಗ್ರಾಮಗಳನ್ನ ಆವರಿಸಿರುವ ಮಳೆ ನೀರು ಮನೆಗಳಿಗೆ ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿದೆ.

ಉತ್ತಮ ಮಳೆಯಾದ ಹಿನ್ನೆಲೆ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿ ಹರಿದಿವೆ. ಅದರಲ್ಲೂ ಜಿಲ್ಲೆಯ ದೊಡ್ಡ ಕೆರೆಗಳಾದ ಅಗ್ರಹಾರ, ಮುದುವಾಡಿ, ಪಾಲಾರ್ ಕೆರೆಗಳು ತುಂಬಿ ಹರಿಯುತ್ತಿವೆ.

ಪಾಲಾರ್ ನದಿಗೆ ಅಡ್ಡಲಾಗಿ ಕಟ್ಟಿರುವ ಬೇತಮಂಗಲದ ಪಾಲಾರ್ ಜಲಾಶಯ ಕೆರೆ ಕೂಡ ತುಂಬಿ ಕೋಡಿ ಹರಿದಿದೆ. ಮತ್ತೊಂದೆಡೆ ಜಲಾಶಯಕ್ಕೆ ಅಡ್ಡಲಾಗಿ ಅಡ್ಡಲಾಗಿ ಕಟ್ಟಿರುವ ಸೇತುವೆಯ ಬಾಗಿಲುಗಳು ಹಾಗೂ ಕೆರೆ ಕಟ್ಟೆಯ ಭಾಗ ಬಿರುಕು ಬಿಟ್ಟಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಕೆರೆ ಕಟ್ಟೆಯಲ್ಲಿ ಬಿರುಕಾಗಿ ಸಾಕಷ್ಟು ನೀರು ಪೋಲಾಗುತ್ತಿದೆ.ಇದರ ಜೊತೆಗೆ ಸರಿಯಾದ ನಿರ್ವಹಣೆ ಇಲ್ಲದೆ ಕ್ರಸ್ಟ್ ಗೇಟ್‌ಗಳ ಮೂಲಕವೂ ನೀರು ಸಾಕಷ್ಟು ಸೋರಿಕೆಯಾಗುತ್ತಿದೆ.

ಕಳೆದ ರಾತ್ರಿ ಕೂಡ ಶ್ರೀನಿವಾಸಪುರ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಚಲ್ದಿಗಾನಹಳ್ಳಿ ಗ್ರಾಮದ ಲಕ್ಷೀ ದೇವಮ್ಮ, ಶ್ರೀನಿವಾಸ್, ವೆಂಕಟಸ್ವಾಮಿ ಎಂಬುವವರ ಮನೆಗಳಿಗೆ ನೀರು ನುಗ್ಗಿತ್ತು. ಗ್ರಾಮಸ್ಥರಲ್ಲಿ ಆತಂಕ ಎದುರಾಗಿದ್ದು ಸ್ಥಳಕ್ಕೆ ಆಗಮಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಬೆಳೆ ನಾಶಕ್ಕೆ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದುರ್ಗಾದೇವಿ ಮೆರವಣಿಗೆ ವೇಳೆ ಹರಿದ ಕಾರು 1 ಸಾವು 20 ಜನರಿಗೆ ಗಾಯ

2 ದಿನದ ಹಿಂದೆ ಮುಳಬಾಗಲು, ಕೆಜಿಎಫ್ ತಾಲ್ಲೂಕು ಸೇರಿದಂತೆ ವಿವಿಧೆಡೆ ಬಹುತೇಕ ಕೆರೆಗಳು ಕೋಡಿ ಹೋಗಿದ್ದು, ಕೆಜಿಎಫ್ ತಾಲೂಕಿನ ದಾಸೇನಹಳ್ಳಿ ಮತ್ತು ತಲ್ಲಪಳ್ಲಿ ಗ್ರಾಮದ ಬಳಿ ರೈತರ ತೋಟಗಳಿಗೆ ನೀರು ನುಗ್ಗಿದೆ. ಪರಿಣಾಮ ನೂರಾರು ಎಕರೆ ತೋಟಗಾರಿಕಾ ಬೆಳೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಜೊತೆಗೆ ರಾಜಕಾಲುವೆಗಳು ಹಾಗೂ ಸಣ್ಣಪುಟ್ಟ ಕಾಲುವೆಗಳು ತುಂಬಿ ರಸ್ತೆಗಳು ಜಲಾವೃತವಾಗಿದ್ದು, ರೈತರು ಬೆಳೆದ ಟೊಮ್ಯಾಟೊ, ಹೂವು, ತೊಗರಿ ಸೇರಿದಂತೆ ಅನೇಕ ಬೆಳೆಗಳು ನಾಶವಾಗಿದೆ.

ಮುಳಬಾಗಲು ತಾಲೂಕಿನ ಮಡಿವಾಳ, ತಾಯಲೂರು, ಕನ್ನಸಂದ್ರ, ಮದ್ದೇರಿ, ಮೇಲಗಾಣಿ ಕೆರೆಗಳು ಕೋಡಿಹರಿದಿದ್ದು, ಹಲವಾರು ವರ್ಷಗಳ ನಂತರ ಕೆರೆಗಳು ಕೋಡಿ ಹರಿಯುತ್ತಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಗ್ರಾಮಸ್ಥ ಸುರೇಶ್, ಮುಳಬಾಗಿಲು ತಾಲೂಕಿನಲ್ಲಿರುವ ಸುಮಾರು 25ಕ್ಕೂ ಹೆಚ್ಚಿನ ಕೆರೆಗಳು ಕೋಡಿ ಹರಿಯುತ್ತಿದ್ದು, ಸರಿಯಾದ ಕಾಲುವೆ, ಅಣೆಕಟ್ಟು ಇಲ್ಲದ ಪರಿಣಾಮ, ಕೆರೆಗಳ ನೀರು ಗ್ರಾಮದತ್ತ ಬರುತ್ತಿವೆ. ಮಳೆಯಿಂದಾಗಿ ಈ ಭಾಗದಲ್ಲಿ ನೂರಾರು ಎಕರೆ ರೈತರ ಜಮೀನು ಜಲಾವೃತವಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಬೆಳೆ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ. ಜೊತೆಗೆ ಕೆಜಿಎಫ್ ತಾಲೂಕಿನ ಸುವರ್ಣಹಳ್ಳಿ ಗ್ರಾಮದ ಮನೆಗಳು ಹಾಗೂ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಲಕ್ಷಾಂತರ ರೂಪಾಯಿ ಬೆಳೆಗಳು ಹಾನಿಯಾಗಿದೆ.

ಒಟ್ಟಿನಲ್ಲಿ ನೀರು ನೀರು ಎನ್ನುತ್ತಿದ್ದ ಬರದ ನಾಡು, ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ನೀರೆ ತುಂಬಿ ತುಳಕುತ್ತಿದೆ. ಕಳೆದ 20 ವರ್ಷಗಳಿಂದ ಇಲ್ಲದ ಮಳೆ ಈ ಬಾರಿ ಕೋಲಾರ ಜಿಲ್ಲೆಗೆ ವರದಾನವಾದರೂ ನೂರಾರು ರೈತರು ಬೆಳೆಗಳನ್ನು ಕಳೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *