ಬೆಂಗ್ಳೂರಲ್ಲಿ ಮಳೆ ಅವಾಂತರ – ತೇಲಿ ಬಂದ ಕಾರುಗಳು, ಮನೆಗೆ ನುಗ್ಗಿದ ಮೋರಿ ನೀರು

ಬೆಂಗಳೂರು: ನಿನ್ನೆ ಸಂಜೆ ಮಳೆಗೆ ಬೆಂಗಳೂರು ನಗರ ತತ್ತರಿಸಿ ಹೋಗಿದೆ. ಒಂದೇ ಒಂದು ಮಳೆಗೆ ಸಿಲಿಕಾನ್ ಸಿಟಿ ಮುಳುಗಿ ಹೋಗಿದೆ. ಸತತ ಮಳೆಯ ಅವಾಂತರಕ್ಕೆ ಜನರು ಹೈರಾಣಾಗಿ ಹೋದರು. ಕತ್ರಿಗುಪ್ಪೆ, ಕಾಮಾಕ್ಯ, ಉತ್ತರಹಳ್ಳಿ, ಚಾಮರಾಜಪೇಟೆ, ಎಂ.ಜಿ ರೋಡ್, ಮೈಸೂರು ರಸ್ತೆ, ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರದಲ್ಲಿ ಮಳೆ ಅಬ್ಬರ ಜೋರಾತ್ತು.

ಕಾಮಾಕ್ಯ ಬಡಾವಣೆ ಸಂಪೂರ್ಣ ಜಲಾವೃತವಾಗಿತ್ತು. ರಸ್ತೆಯಲ್ಲಿ ನೀರು ನಿಂತು, ತೇಲಿ ಬಂದ ಕಾರುಗಳು, ಸ್ಕೂಟರ್‍ಗಳು ಒಂದರ ಮೇಲೊಂದು ನಿಂತಿರುವುದು ಕಂಡುಬಂದವು. ಕಾರುಗಳ ಒಳಗೂ ನೀರು, ಮನೆ ಒಳಗೂ ನೀರು ತುಂಬಿಕೊಂಡಿತ್ತು. ಫ್ರಿಡ್ಜ್, ಟಿವಿ, ವಾಷಿಂಗ್ ಮೆಷಿನ್,ಮಿಕ್ಸಿ, ಮಂಚ ಎಲ್ಲವೂ ನೀರುಪಾಲಾಗಿತ್ತು. ವೃದ್ಧರೊಬ್ಬರ ಮನೆಗೆ 4 ಅಡಿಗೂ ಹೆಚ್ಚು ನೀರು ನುಗ್ಗಿದ್ದು ಮನೆಯ ವಸ್ತುಗಳೆಲ್ಲ ನೀರು ಪಾಲಾಗಿದೆ. ಮನೆಯಲ್ಲಿ ವೃದ್ಧ ದಂಪತಿ ನಮ್ಮ ಜೀವ ಉಳಿದಿದ್ದೇ ಹೆಚ್ಚು ಎಂಬ ಆತಂಕದಲ್ಲೇ ರಾತ್ರಿ ಕಳೆದಿದ್ದಾರೆ.

ಬೆಳಗ್ಗೆಯಿದ್ದರೆ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬರುವಂತಹ ಜನರು ಸಂಜೆ ಮಳೆಯಿಂದಾಗಿ ತತ್ತರಿಸಿದ್ದಾರೆ. ಸಂಜೆ ಸುರಿದ ಮಳೆಯಿಂದಾಗಿ ಮನೆಗಳಿಗೆ 4-5 ಅಡಿಗಳಷ್ಟು ನೀರು ನುಗ್ಗಿದೆ. ಅಲ್ಲದೇ ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿ ಆಗಿದ್ದು ಬಳಕೆ ಯೋಗ್ಯವಿಲ್ಲದಂತಾಗಿದೆ. ಶಾಶ್ವತ ಪರಿಹಾರಕ್ಕಾಗಿ ಜನರು ಆಗ್ರಹಿಸುತ್ತಿದ್ದಾರೆ. ಕಾಮಾಕ್ಯದಲ್ಲಿರುವ ಹೋಟೆಲ್‍ವೊಂದಕ್ಕೆ ರಾಜಕಾಲುವೆ ನೀರು ನುಗಿದ್ದು ಬಡಪಾಯಿಗಳ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಹೋಟೆಲ್‍ನಲ್ಲಿದ್ದ ಸಾಮಾನು, ದಿನಸಿ ಎಲ್ಲ ಕೊಚ್ಚೆ ನೀರಿನ ಪಾಲಾಗಿದೆ. ಹೋಟೆಲ್ ಮಾಲೀಕರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ. ಕೆಲ ಮನೆಗಳಿಗೆ ಮೋರಿ ನೀರು ನುಗ್ಗಿದೆ. ಇದ್ರಿಂದ ಮನೆಯಲ್ಲಿ ಶೇಖರಿಸಿದ್ದ ದಿನಸಿಗಳೆಲ್ಲ ನೀರು ಪಾಲಾಗಿದೆ.

ಮನೆಯಲ್ಲಿ ವೃದ್ಧರೊಬ್ಬರಿಗೆ ಉಸಿರಾಟದ ಸಮಸ್ಯೆ ಇತ್ತು. ಮನೆಗೆ ಮಳೆ ನೀರು ನುಗ್ಗಿ ಆಮ್ಲಜನಕ ಪೂರೈಸುವ ಯಂತ್ರವೂ ಜಲಾವೃತವಾಗಿದೆ. ಇದ್ರಿಂದ ವೃದ್ಧರಿಗೆ ಉಸಿರಾಟದ ಸಮಸ್ಯೆ ಆಗಿ ತಕ್ಷಣವೇ ಆಂಬ್ಯುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಯ್ತು. ಮನೆಯವರು ಪರ್ಯಾಯ ಮಾರ್ಗಕ್ಕಿಂತ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಈಶ್ಬರಪ್ಪ ರಾಜೀನಾಮೆ ಕೊಡುವುದು ಬೇಡ, ವಜಾಗೊಳಿಸಿ: ರಮೇಶ್ ಕುಮಾರ್

ಉತ್ತರಹಳ್ಳಿಯ ಗುಂಡು ಮುನೇಶ್ವರ ರಸ್ತೆಯಲ್ಲಿ ಮನೆಗಳು ಜಲಾವೃತವಾಗಿವೆ. ಮನೆಗಳಿಗೆ ನುಗ್ಗಿದ ಕೆರೆ ನೀರು, ಜನರ ಪರದಾಡಿದ್ದಾರೆ. ಮೈಸೂರು ರೋಡ್‍ನಲ್ಲಿ ಕಾರು, ಬೈಕ್‍ಗಳು ಜಲಾವೃತಗೊಂಡಿದ್ದವು. ಶಾಪಿಂಗ್ ಹಾಟ್‍ಸ್ಪಾಟ್ ಎಂ.ಜಿ ರೋಡ್‍ನಲ್ಲಿ ನೀರೋ ನೀರು ಎಂಬಂತಾಗಿತ್ತು. ಎಂ.ಜಿ ರೋಡ್ ರಸ್ತೆಗಳು ಕೆರೆಯಂತಾಗಿದ್ದವು. ವಿಠ್ಠಲ್ ಮಲ್ಯ ರಸ್ತೆಯಲ್ಲೂ ನೀರು ನಿಂತಿತ್ತು. ಚಾಮರಾಜಪೇಟೆಯಲ್ಲಿ ಬೃಹತ್ ಮರ ಧರಾಶಾಹಿಯಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಟ ಅನುಭವಿಸಿದರು.

Comments

Leave a Reply

Your email address will not be published. Required fields are marked *