26 ವರ್ಷಗಳ ಬಳಿಕ ಕೋಡಿ ಬಿದ್ದ ಹಿರೇಮಲ್ಲನಹೊಳೆ ಕೆರೆ – 30ಕ್ಕೂ ಹೆಚ್ಚು ಮನೆಗಳು ಜಲಾವೃತ

ದಾವಣಗೆರೆ: ಜಿಲ್ಲೆಯ (Davanagere) ಜಗಳೂರು (Jagalur) ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು (Rain), ಹಿರೇಮಲ್ಲನಹೊಳೆ ಗ್ರಾಮದ ಕೆರೆ ಕೋಡಿ ಬಿದ್ದು ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ಭಾರೀ ಮಳೆಯಿಂದ ಏಕಾಏಕಿ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಮನೆಯಲ್ಲಿದ್ದ ದಿನ ಬಳಕೆ ವಸ್ತುಗಳು ಹಾಳಾಗಿವೆ. ಮನೆಯಲ್ಲಿದ್ದ ವಸ್ತುಗಳನ್ನು ಜನ ಬೇರೆಡೆಗೆ ಸಾಗಿಸುತ್ತಿದ್ದಾರೆ. 30ಕ್ಕೂ ಹೆಚ್ಚು ಕುಟುಂಬಗಳನ್ನು ಗ್ರಾಮಸ್ಥರು ಬೇರೆ ಕಡೆಗೆ ಕರೆತಂದು ಆಶ್ರಯದ ವ್ಯವಸ್ಥೆ ಮಾಡಿದ್ದಾರೆ.

ಸುಮಾರು 26 ವರ್ಷಗಳ ನಂತರ ಹಿರೇಮಲ್ಲನಹೊಳೆ ಕೆರೆ ಕೋಡಿ ಬಿದ್ದಿದೆ. ಊರಿಗೆ ನುಗ್ಗಿದ ನೀರನ್ನು ಹೊರ ಹೋಗುವಂತೆ ಮಾಡಲು ಜೆಸಿಬಿ ಬಳಸಿ ಕಾರ್ಯಾಚರಣೆ ಮಾಡಲಾಗುತ್ತಿದೆ.

ಬರದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಈ ಬಾರಿ ಬಹುತೇಕ ಕೆರೆಗಳು ಕೋಡಿ ಬಿದ್ದಿವೆ. ಒಂದೆಡೆ ಕೆರೆ ಕೋಡಿಯಿಂದ ರೈತರ ಮೊಗದಲ್ಲಿ ಸಂಭ್ರಮ ಮನೆ ಮಾಡಿದರೆ, ಇನ್ನೊಂದೆಡೆ ಮಳೆಯ ಅವಾಂತರದಿಂದ ಜನ ಕಂಗಾಲಾಗಿದ್ದಾರೆ.