ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಮಳೆ – ರಸ್ತೆಯಲ್ಲಿ ಕೆರೆಯಂತೆ ನಿಂತ ನೀರು

ಬೆಂಗಳೂರು: ಹಲವು ದಿನಗಳ ಬಳಿಕ ಬೆಂಗಳೂರಿನಲ್ಲಿ (Bengaluru) ಬೆಳ್ಳಂಬೆಳಗ್ಗೆ ಭಾರೀ ಮಳೆಯಾಗಿದ್ದು (Heavy Rain) ಮೆಜೆಸ್ಟಿಕ್, ಕಾಪೋರೇಷನ್, ಹೆಬ್ಬಾಳ, ಮಲ್ಲೇಶ್ವರಂ, ಯಶವಂತಪುರ ಸೇರಿ ನಗರದ ಹಲವು ಕಡೆ ಸವಾರರು ಪರದಾಟ ನಡೆಸಿದ್ದಾರೆ.

ತಡರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿದಿದ್ದು ನಗರದಾದ್ಯಂತ ಸುಮಾರು 60 ಮಿ.ಮೀಟರ್‌ ನಷ್ಟು ಮಳೆಯಾಗಿದೆ. ತಡರಾತ್ರಿ ಆರಂಭವಾಗಿ, ಬೆಳಗ್ಗೆ 7 ಗಂಟೆವರೆಗೂ ಅನೇಕ ಕಡೆ ಮಳೆ ಸುರಿದಿದೆ. ಮುಂದಿನ ಮೂರ್ನಾಲ್ಕು ದಿನ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‌ಗೆ ಡಿಜಿಟಲ್‌ ಸ್ಪರ್ಶ – ಇನ್ಮುಂದೆ ಆನ್‌ಲೈನ್‌ನಲ್ಲಿ ಊಟ ಬುಕ್ಕಿಂಗ್‌!

 

ವಿಂಡ್ಸರ್ ಮ್ಯಾನರ್ ಸೇತುವೆ ಸರ್ವೀಸ್ ರಸ್ತೆಯಲ್ಲಿ ಕೆರೆಯಂತೆ ನೀರು ನಿಂತಿದೆ. ಎರಡು ಅಡಿಯಷ್ಟು ನೀರು ತುಂಬಿ ಅವಾಂತರ ಸೃಷ್ಟಿಯಾಗಿದೆ. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು ಮಳೆ ನೀರಿನಲ್ಲಿ ವಾಹನಗಳು ಕೆಟ್ಟು ನಿಂತಿವೆ.  ಇದನ್ನೂ ಓದಿ: Tungabhadra Dam | 5 ದಿನಗಳಲ್ಲಿ ಗೇಟ್‌ ರಿಪೇರಿ – ಸರ್ಕಾರಕ್ಕೆ ಅಧಿಕಾರಿಗಳ ಭರವಸೆ

ಭಾರೀ ಮಳೆಗೆ ಮಲ್ಲೇಶ್ವರಂ ಕ್ಲೌಡ್ ನೈನ್ ಆಸ್ಪತ್ರೆ ಸಮೀಪ ರಸ್ತೆಗೆ ಮರ ಉರುಳಿದೆ. ಎರಡು ಸೀಳುಗಳಾಗಿ ಮುರಿದು ರಸ್ತೆಗೆ ಮರ ಬಿದ್ದಿದ್ದು ಆ ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ಬಂದ್ ಮಾಡಲಾಗಿದೆ.