ಬಿಸಿಲಿನ ಝಳಕ್ಕೆ ಗುಡುಗು ಸಹಿತ ಆಲಿಕಲ್ಲು ಮಳೆ

– ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ

ಚಿಕ್ಕಮಗಳೂರು/ಹಾವೇರಿ: ಹೇಳೋಕೆ ಮಲೆನಾಡಾದರೂ ಬಿಸಿಲಿನ ತಾಪ 36 ರಿಂದ 38 ಸೆಲ್ಸಿಯಸ್ ನಷ್ಟಿದ್ದ ಕಾಫಿನಾಡು, ಮಲೆನಾಡು ಭಾಗದಲ್ಲಿ ವರುಣನ ಮೊದಲ ಅಬ್ಬರಕ್ಕೆ ಹೈರಾಣಾಗಿದ್ದಾರೆ.

ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಸುಮಾರು 45 ನಿಮಿಷಗಳ ಕಾಲ ಸುರಿದ ಭಾರೀ ಮಳೆ-ಗಾಳಿಗೆ ಜನ ಕಂಗಾಲಾಗಿದ್ದಾರೆ. ಇದೇ ವೇಳೆ ಬಾಳೆಹೊನ್ನೂರಿನ ರೇಣುಕಾ ನಗರದಲ್ಲಿ ಸುಮಾರು 90 ಅಡಿ ಎತ್ತರದ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಸಂಪೂರ್ಣ ಸುಟ್ಟು ಕರಕಲಾಗಿದೆ. ಸಿಡಿಲಿನ ರಭಸಕ್ಕೆ ತೆಂಗಿನ ಮರ ಹೊತ್ತಿ ಉರಿಯುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ.

ದಿಢೀರನೆ ಸುರಿದ ಮಳೆಗೆ ಮಕ್ಕಳು ಭಯದಿಂದ ಮನೆಯತ್ತ ಓಡುತ್ತಿದ್ದ ದೃಶ್ಯವೂ ಕೂಡ ಮನೋಜ್ಞವಾಗಿತ್ತು. ಬಾಳೆಹೊನ್ನೂರಿನ ಸುತ್ತಮುತ್ತ ಭಾರೀ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ದಿನದಿಂದ ದಿನಕ್ಕೆ ಬಿಸಿಲಿನ ಧಗೆ ಮಿತಿ ಮೀರುತ್ತಿದೆ. ಜನರು ವರುಣನ ಆಗಮನಕ್ಕಾಗಿ ಜಾತಕ ಪಕ್ಷಿಗಳಂತೆ ಕಾದು ಕೂತಿದ್ದರು. ಬಿಸಿಲಿನ ತಾಪಕ್ಕೆ ಕಾಫಿ, ಮೆಣಸು, ಅಡಿಕೆ ಹಾಗೂ ಇತರೆ ಆಹಾರ ಹಾಗೂ ವಾಣಿಜ್ಯ ಬೆಳೆಗಳು ಸೊರಗಿದ್ದವು. ದಿಢೀರನೆ ಭಾರೀ ಮಳೆಯಾಗಿದ್ದರಿಂದ ಜನ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನೂ ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಹಾವೇರಿ ಜಿಲ್ಲೆಯ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಶುಕ್ರವಾರ ಸಂಜೆ ವೇಳೆ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿದ್ದ ಜಿಲ್ಲೆಯ ಜನರಿಗೆ ಆಲಿಕಲ್ಲು ಮಳೆ ಕೊಂಚ ರಿಲ್ಯಾಕ್ಸ್ ನೀಡಿದೆ. ಮಳೆರಾಯ ತನ್ನೊಂದಿಗೆ ಆಲಿಕಲ್ಲುಗಳನ್ನ ಸುರಿಸಿದ್ದು, ಜಿಲ್ಲೆಯ ಜನರಿಗೆ ಖುಷಿ ನೀಡಿದ್ದಾನೆ. ಸೂರ್ಯನ ತಾಪದಿಂದ ಬೇಸತ್ತು ಆಕಾಶ ನೋಡುತ್ತಿದ್ದ ಜನರಿಗೆ ಹದಿನೈದು ನಿಮಿಷಗಳ ಕಾಲ ಸುರಿದ ಮಳೆ ತಂಪು ತಂಪು ಕೂಲ್ ಕೂಲ್ ಎನ್ನುವ ವಾತಾವರಣ ಸೃಷ್ಟಿಸಿತ್ತು.

Comments

Leave a Reply

Your email address will not be published. Required fields are marked *