ಮಲೆನಾಡಲ್ಲಿ ಮಳೆ ಅಬ್ಬರ- ಕೊಚ್ಚಿ ಹೋದ ಕಾಫಿ ತೋಟ

ಚಿಕ್ಕಮಗಳೂರು: ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮೂವರು ರೈತರ ಸುಮಾರು ಒಂದೂವರೆ ಎಕರೆ ಕಾಫಿ ತೋಟ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ಕಳಸ ತಾಲೂಕಿನ ಮುಳ್ಳೋಡಿ ಗ್ರಾಮದಲ್ಲಿ ನಡೆದಿದೆ.

ಸಂಜೆ ತೋಟದಲ್ಲಿ ಅಡ್ಡಾಡಿ ಮನೆಗೆ ಹೋಗಿದ್ದ ಸಣ್ಣ ಬೆಳೆಗಾರ ಬೆಳಗ್ಗೆ ತೋಟಕ್ಕೆ ಬರುವಷ್ಟರಲ್ಲಿ ತೋಟವೇ ಅಲ್ಲೋಲ-ಕಲ್ಲೋಲವಾಗಿತ್ತು. ತೋಟದ ಸ್ಥಿತಿಯನ್ನ ಕಣ್ಣಾರೆ ಕಂಡ ಸಣ್ಣ ಕಾಫಿ ಬೆಳೆಗಾರ ತಲೆ ಮೇಲೆ ಕೈ ಹೊದ್ದು ಕೂತಿದ್ದಾರೆ. ಮುಳ್ಳೋಡಿ ಗ್ರಾಮದ ಮೂವರು ರೈತರ ತೋಟದ ಸ್ಥಿತಿ ಇದೇ ಆಗಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ಸಿಡಿಲಿಗೆ ಇಬ್ಬರು ಬಲಿ, ಚಿಕ್ಕೋಡಿಯಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋದ 35 ಜಾನುವಾರುಗಳು

ಈ ರೀತಿ ಬೆಳೆಗಾರರ ತೋಟ ಕೊಚ್ಚಿ ಹೋಗಿರುವುದು ಇದೇ ಮೊದಲಲ್ಲ. ಕಳೆದ ಎರಡ್ಮೂರು ವರ್ಷವೂ ಸುರಿದ ಭಾರೀ ಮಳೆಗೆ ಕಳಸ ಭಾಗದ ಹಲವು ಬೆಳೆಗಾರರ ತೋಟ ಕೊಚ್ಚಿ ಹೋಗಿತ್ತು. ಈ ವರ್ಷ ರಾತ್ರಿ ವೇಳೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಸಣ್ಣ ಬೆಳೆಗಾರರು ಕಂಗಾಲಾಗಿದ್ದಾರೆ. ಮುಳ್ಳೋಡಿ ಗ್ರಾಮದ ಸೇತುವೆಯಲ್ಲಿ ನೀರು ಕಟ್ಟಿಕೊಂಡು ಸೇತುವೆ ಕಳಚಿ ಬಿದ್ದ ಪರಿಣಾಮ ತೋಟದಲ್ಲಿ ಹರಿದ ಭಾರೀ ಪ್ರಮಾಣದ ನೀರಿನಿಂದ ತೋಟ ಕೊಚ್ಚಿ ಹೋಗಿದೆ.

ರಸ್ತೆ ಬದಿಯ ಮಣ್ಣು ಕುಸಿದಿರುವುದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಗ್ರಾಮದಲ್ಲಿ ಮೂಲಭೂತ ಸೌಕರ್ಯವಿಲ್ಲ. ರಸ್ತೆಯನ್ನಂತು ಕೇಳೋದೆ ಬೇಡ. ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜವಿಲ್ಲ. ಮಕ್ಕಳು ಶಾಲಾ-ಕಾಲೇಜಿಗೆ ಹೋಗಿಬರೋದು ಕಷ್ಟವಾಗಿದೆ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: FIR ಇಲ್ಲದೇ ನನ್ನನ್ನು ಗೃಹ ಬಂಧನದಲ್ಲಿರಿಸಿದೆ: ಪ್ರಿಯಾಂಕಾ ಗಾಂಧಿ ಕಿಡಿ

ಕಳೆದ ಎರಡ್ಮೂರು ವರ್ಷಗಳಿಂದ ನಿರಂತರವಾಗಿ ತೋಟವನ್ನ ಕಳೆದುಕೊಳ್ಳುತ್ತಿದ್ದೇವೆ. ಆದರೆ ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ ಎಂದು ತೋಟ ಕಳೆದುಕೊಂಡು ಸಣ್ಣ ಬೆಳೆಗಾರರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಮೂಡಿಗೆರೆ ತಾಲೂಕಿನ ಗಬ್ಗಲ್ ಸುತ್ತ ಭಾರೀ ಮಳೆ ಸುರಿದ ಪರಿಣಾಮ ಗಬ್ಗಲ್ ಗ್ರಾಮದ ಕಿರು ಸೇತುವೆ ಕೊಚ್ಚಿ ಹೋಗಿದ್ದು, ಹತ್ತಾರು ಹಳ್ಳಿಯ ಸಂಪರ್ಕ ಸೇತುವೆಯೇ ಕಳಚಿಬಿದ್ದಂತಾಗಿದೆ. ಮಲೆನಾಡಲ್ಲಿ ರಾತ್ರಿ ವೇಳೆ ಸುರಿಯುತ್ತಿರುವ ಭಾರೀ ಮಳೆಯಿಂದ ಮಲೆನಾಡಿಗರ ಜನಜೀವನ ಅಸ್ತವ್ಯಸ್ತಗೊಂಡಿದೆ.

Comments

Leave a Reply

Your email address will not be published. Required fields are marked *