ಆಂಧ್ರದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ- ಬೆಂಗ್ಳೂರಲ್ಲಿ ಮುಂದುವರಿದ ವರುಣಾರ್ಭಟ

ಬೆಂಗಳೂರು: ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಸುಳಿಗಾಳಿಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 1 ವಾರದಿಂದ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾಯ್ತು. ಈಗ ಆಂಧ್ರದ ಕರಾವಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಮುಂದುವರೆದಿದೆ. ಬೆಂಗಳೂರಿನಲ್ಲಿ ಮಳೆ ಮತ್ತೆ ಅವಾಂತರ ಸೃಷ್ಟಿಸಿದೆ.

ಬೆಂಗಳೂರಿನಲ್ಲಿ ನಿನ್ನೆ ಸಂಜೆಯಾಗ್ತಿದ್ದಂತೆ ವರುಣನ ಆರ್ಭಟ ಜೋರಾಗಿತ್ತು. ಮಲ್ಲೇಶ್ವರಂನ ಮಂತ್ರಿಮಾಲ್ ಬಳಿ ರಸ್ತೆಯ ಮೇಲೆ ನೀರು ನದಿಯಂತೆ ಹರಿಯುತ್ತಿತ್ತು. ಪರಿಣಾಮ ವಾಹನ ಸವಾರರು ಪರದಾಡಿದ್ರು. ಲಕ್ಷ್ಮೀನಾರಾಯಣಪುರ, ಬಸವೇಶ್ವರನಗರ, ಗಾಯತ್ರಿನಗರದಲ್ಲಿ ಮನೆಗಳಿಗೆ ನೀರು ನುಗ್ಗಿ, ಜನರು ಪರದಾಡಿದ್ರು. ಗಾಯಿತ್ರಿನಗರ ಪಾರ್ಕ್‍ನಲ್ಲಿ ಬೃಹತಾಕಾರದ ಮರ ಧರೆಗುರುಳಿದ್ರೆ, ಆರ್.ಆರ್.ನಗರ, ಪೀಣ್ಯ ವಾರ್ಡ್ ನಂ. 38. 4ನೇ ಬ್ಲಾಕ್‍ನಲ್ಲಿ ಮನೆಗಳಿಗೆ ಮಳೆ ನೀರು ನುಗಿದ ಪರಿಣಾಮ, ನಿವಾಸಿಗಳು ಜಾಗರಣೆ ಮಾಡಿದರು. ಇದನ್ನೂ ಓದಿ: 27 ರನ್‌ಗಳ ಭರ್ಜರಿ ಜಯ – 4ನೇ ಬಾರಿ ಚೆನ್ನೈ ಚಾಂಪಿಯನ್‌

ಮಹಾಲಕ್ಷ್ಮೀ ಲೇಔಟ್ ಮೆಟ್ರೋ ನಿಲ್ದಾಣದಿಂದ ರಾಜಾಜಿನಗರ ಮೆಟ್ರೋ ನಿಲ್ದಾಣದಕ್ಕೆ ಬರುವ ಮಾರ್ಗದಲ್ಲಿ ರಸ್ತೆಯಲ್ಲಿ ನೀರು ನಿಂತು ಸವಾರರು ಪರದಾಡಿದ್ರು. ಬಿಳೇಕಲ್ಲಹಳ್ಳಿಯ ಅನುಗ್ರಹ ಲೇಔಟ್‍ನಲ್ಲೂ ರಸ್ತೆಗಳು ಕೆರೆಯಂತಾಗಿದ್ದವು. ಎಲ್.ಎನ್. ಪುರ ಮತ್ತು ಎಚ್‍ಎಸ್‍ಆರ್ ಲೇಔಟ್‍ನಲ್ಲೂ ಮಳೆ ಅಬ್ಬರ ಜೋರಾಗಿತ್ತು. ರಸ್ತೆಯಲ್ಲಿ ಮಳೆ ನೀರು ನಿಂತಿದ್ದ ಪರಿಣಾಮ ವಾಹನ ಸವಾರರು ಹೈರಾಣಾಗಿ ಹೋದರು.

ಮೌರ್ಯ ಸರ್ಕಲ್‍ನಲ್ಲಿ ಮಳೆ ನೀರು ನಿಂತು ವಾಹನ ಸವಾರರು ಕಿರಿಕಿರಿ ಅನುಭವಿಸಿದರು. ಇನ್ನು ಶೇಷಾದ್ರಿ ರಸ್ತೆ, ಪ್ರಕಾಶನಗರ ರಸ್ತೆಗಳು ಮಿನಿ ಕೆರೆಗಳಂತಾಗಿದ್ದವು. ಬೊಮ್ಮನಹಳ್ಳಿ ಸುತ್ತಮುತ್ತ ಧಾರಾಕಾರ ಮಳೆಯಾಯ್ತು. ರಸ್ತೆ ಮೇಲೆ ನೀರು ಕೆರೆಯಂತೆ ನಿಂತಿದ್ರೆ ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯ್ತು. ಇದನ್ನೂ ಓದಿ: ಉಡುಪಿಯಲ್ಲಿ ದುರ್ಗಾ ದೌಡ್ – ಮೆರವಣಿಗೆಯಲ್ಲಿ ತಲವಾರು ಪ್ರದರ್ಶಿಸಿದ ಕಾರ್ಯಕರ್ತರು

ಮತ್ತೊಂದ್ಕಡೆ ಕೆ.ಆರ್.ಸರ್ಕಲ್, ಕಾರ್ಪೋರೇಷನ್, ಮೌರ್ಯ ಸರ್ಕಲ್, ಓರಾಯನ್ ಮಾಲ್ ಸುತ್ತಮುತ್ತ ವರುಣ ಅಬ್ಬರಿಸಿ ಬೊಬ್ಬಿರಿದ. ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರೋದ್ರಿಂದ ರಾಜ್ಯದಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ತಜ್ಞ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ. ಅ.18ರವರೆಗೆ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು, ಮಂಗಳೂರಲ್ಲಿ ಭಾರೀ ಮಳೆ ಸಾಧ್ಯತೆ ಇದ್ದು, ಎಲ್ಲಾ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

Comments

Leave a Reply

Your email address will not be published. Required fields are marked *