ಮೆಟ್ರೋ ನಿಲ್ದಾಣದಲ್ಲೂ ನೀರೋ ನೀರು- ಕೆರೆ ಒಡೆದು ಅಂದಾನಪ್ಪ ಲೇಔಟ್ ಜಲಾವೃತ

– ಪೊಲೀಸರಿಗೂ ವರುಣನ ಕಾಟ 

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮೆಟ್ರೋ ನಿಲ್ದಾಣಗಳಲ್ಲೂ ನೀರೋ ನೀರು. ಬಯ್ಯಪ್ಪನಹಳ್ಳಿಯ ಮೆಟ್ರೋ ನಿಲ್ದಾಣಕ್ಕೆ ನೀರು ನುಗ್ಗಿದ್ದು, ಪ್ಯಾಸೇಜ್‍ನಲ್ಲೆಲ್ಲಾ ನೀರು ನಿಂತಿದೆ. ಜನರು ಮೆಟ್ರೋ ನಿಲ್ದಣಕ್ಕೆ ಹೆಜ್ಜೆ ಇಡೋಕೆ ಹಿಂದೆ ಮುಂದೆ ನೋಡುವ ಸ್ಥಿತಿ ಎದುರಾಗಿದೆ.

ಇನ್ನು ಮಳೆ ಪೊಲೀಸರನ್ನು ಕೂಡ ಬಿಡಲಿಲ್ಲ. ರಾತ್ರಿ ಪಾಳಿ ಗಸ್ತು ತಿರುಗುವ ಪೊಲೀಸರಿಗೆ ವರುಣರಾಯನ ಕಾಟ ಎದುರಾಗಿತ್ತು. ಮಾಗಡಿ ರಸ್ತೆಯ ಟೋಲ್‍ಗೇಟ್ ಬಳಿ ನಡು ರಸ್ತೆಯಲ್ಲಿ ಪೊಲೀಸ್ ಕಾರೊಂದು ಕೆಟ್ಟು ನಿಂತಿತ್ತು. ಅರ್ಧಗಂಟೆಗೂ ಹೆಚ್ಚು ಕಾಲ ಕೆಟ್ಟು ನಿಂತ ಕಾರನ್ನು ತಳ್ಳಲು ಮಳೆಯಲ್ಲೂ ಪೊಲೀಸರು ನಾನಾ ಪಾಡು ಪಟ್ಟರು. ಪೊಲೀಸ್ ವಾಹನ ಕೆಟ್ಟು ನಿಂತ ಹಿನ್ನೆಲೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಗೊರಗುಂಟೆಪಾಳ್ಯ ಬಳಿಯಿರುವ ಆರ್‍ಎನ್‍ಎಸ್ ಮೋಟರ್ಸ್ ಸಂಪೂರ್ಣ ಜಲಾವೃತವಾಗಿದೆ. ಆರ್‍ಎನ್‍ಎಸ್ ಬಳಿಯಿರುವ ಮನೆಗಳಿಗೂ ನೀರುನುಗ್ಗಿದೆ. ಪರಿಣಾಮ ನಾಲ್ಕೈದು ಮಕ್ಕಳು ಮನೆಯೊಳಗೆ ಸಿಲುಕಿಕೊಂಡು ಹೊರಬರಲಾಗದೆ ಪರದಾಡುತ್ತಿದ್ದರು. ಅಲ್ಲಿನ ಸ್ಥಳೀಯರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಮತ್ತೊಂದೆಡೆ ಸಾವಿನ ಮನೆಗೂ ಮಳೆರಾಯ ಅಡ್ಡಿಯಾಗಿದ್ದಾನೆ. ರಸ್ತೆಯಲ್ಲಾ ಜಲಾವೃತವಾಗಿರೋದ್ರಿಂದ ರಾಮಯ್ಯ ಆಸ್ಪತ್ರೆಯಿಂದ ಗೊರಗುಂಟೆಪಾಳ್ಯಕ್ಕೆ ಶವ ತರಲು ಸಂಬಂಧಿಕರು ಹೆಣಗಾಡುತ್ತಿದ್ದಾರೆ.

ದೊಡ್ಡಬಿದರಕಲ್ಲಿನ ಕೆರೆ ಒಡೆದಿದ್ದು ಅಂದಾನಪ್ಪ ಲೇಔಟ್ ನದಿಯಂತಾಗಿಬಿಟ್ಟಿದೆ. ನದಿಯೋಪಾದಿಯಲ್ಲಿ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ಹರಿಯುತ್ತಿದೆ. ಮನೆಗಳಿಗೆಲ್ಲಾ ನೀರು ನುಗ್ಗಿದ್ದು, ಸ್ಥಳೀಯರು ಪರದಾಡ್ತಿದ್ದಾರೆ.

https://twitter.com/WhitefieldTrf/status/912876241329336321

Comments

Leave a Reply

Your email address will not be published. Required fields are marked *