ಕೃಷ್ಣೆಯ ಅಬ್ಬರಕ್ಕೆ ಕೊಚ್ಚಿಹೋದ ಚಿಕ್ಕಪಡಸಗಿ ಸೇತುವೆ – ರಸ್ತೆಗೆ ಕುಸಿದ ಬೃಹತ್ ಗುಡ್ಡ

ಬೆಂಗಳೂರು: ಕೃಷ್ಣಾ ನದಿ ಪ್ರವಾಹದ ಎಫೆಕ್ಟ್ ಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸಮೀಪದ ರಸ್ತೆ ಸೇತುವೆ ಕೊಚ್ಚಿ ಹೋಗಿದೆ.

ಹುಬ್ಬಳ್ಳಿ-ವಿಜಯಪುರ ರಾಜ್ಯ ಹೆದ್ದಾರಿ-34ರಲ್ಲಿರುವ ಸೇತುವೆ ಸಂಪೂರ್ಣ ಹಾಳಾಗಿದೆ. ಪ್ರವಾಹದಲ್ಲಿ ಈ ಸೇತುವೆ ಮುಳುಗಿದ್ದ ಕಾರಣ ಕಳೆದ 15ದಿನದಿಂದ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಆದರೆ ನೀರಿನ ಹರಿವು ಕಡಿಮೆ ಆಗದ ಕಾರಣ ಸೇತುವೆ ಹಾಳಾಗಿದೆ. ಪರಿಣಾಮ ಜಮಖಂಡಿ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳ ಜನ ಪರ್ಯಾಯ ಮಾರ್ಗದ ಮೂಲಕ ಸಂಚರಿಸುವಂತಾಗಿದೆ.

ಕೃಷ್ಣಾ ಪ್ರವಾಹಕ್ಕೆ ಮುಳುಗಡೆಯಾಗಿದ್ದ ಸೇತುವೆ ಬಿರುಕುಬಿಟ್ಟಿದ್ದು, ಯಾವುದೇ ಕ್ಷಣದಲ್ಲಾದರೂ ಸೇತುವೆ ಕುಸಿಯುವ ಭೀತಿ ಹಿನ್ನೆಲೆಯಲ್ಲಿ ದರೂರು ಹಲ್ಯಾಳ ಸೇತುವೆ ಸಂಚಾರಕ್ಕೆ ನಿಷೇಧಿಸಲಾಗಿದೆ. ದರೂರು ಹಲ್ಯಾಳ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಇದಾಗಿದ್ದು, ಸುಮಾರು ಒಂದು ಕಿ.ಮೀನಷ್ಟು ಬಾಯಿಬಿಟ್ಟಿರುವ ಸೇತುವೆಯ ಬಳಿ ರಸ್ತೆಯಿದೆ. ಹೀಗಾಗಿ ಭಾರೀ ವಾಹನ ಸಂಚಾರಕ್ಕೆ ಅಥಣಿ ಪೊಲೀಸರು ಅನುವು ಮಾಡಿಕೊಟ್ಟಿಲ್ಲ. ಮಹಾರಾಷ್ಟ್ರ ಮತ್ತು ಕರ್ನಾಟಕದ ಸಂಪರ್ಕದ ಕೊಂಡಿಯಾಗಿದ್ದ ಸೇತುವೆ ಇದಾಗಿದೆ. ಯಾವುದೇ ಕ್ಷಣದಲ್ಲಿ ಸೇತುವೆ ಕುಸಿಯುವ ಭೀತಿ ಹಿನ್ನೆಲೆಯಲ್ಲಿ ಅಥಣಿ ಪೊಲೀಸರಿಂದ ಸೇತುವೆ ಬಳಿ ಬಿಗಿ ಭದ್ರತೆಗೊಳಿಸಲಾಗಿದೆ.

ಮಳೆ ನಿಂತು ನಾಲ್ಕೈದು ದಿನ ಕಳೆದರೂ ಗುಡ್ಡ ಕುಸಿತ ನಿಲ್ಲುತ್ತಿಲ್ಲ. ಯಾಕೆಂದರೆ ಕಳಸ-ಹೊರನಾಡು ರಸ್ತೆ ಮೇಲೆ ಮೂಡಿಗೆರೆ ಸಮೀಪ ಮತ್ತೆ ಬೃಹತ್ ಗುಡ್ಡ ಕುಸಿದಿದೆ. ಸುಮಾರು ನಾಲ್ಕರಿಂದ ಐದು ಸಾವಿರ ಲಾರಿ ಲೋಡ್‍ನಷ್ಟು ಮಣ್ಣು ಅರ್ಧ ಕಿಲೋಮೀಟರ್ ರಸ್ತೆಯನ್ನು ಆವರಿಸಿದೆ. ಅದೃಷ್ಟವಶಾತ್ ಗುಡ್ಡ ಕುಸಿಯುವಾಗ ಯಾವ ವಾಹನಗಳು ಓಡಾಡಿಲ್ಲ. ರಸ್ತೆ ಮೇಲಿರುವ ಮಣ್ಣನ್ನ ತೆಗೆದರೂ ಮತ್ತೆ ಅದೇ ಜಾಗದಲ್ಲಿ ರಸ್ತೆ ನಿರ್ಮಾಣ ಅಸಾಧ್ಯವಾಗಿದೆ. ಯಾಕೆಂದರೆ ರಸ್ತೆ ಕೆಳಭಾಗದ ಮಣ್ಣು ಕೂಡ ಕೊಚ್ಚಿ ಹೋಗಿದೆ. ರಸ್ತೆ ಬದಿಯ 150-200 ಅಡಿ ಎತ್ತರದ ಗುಡ್ಡವನ್ನ ಕೊರೆದು ಹೊಸ ರಸ್ತೆ ನಿರ್ಮಾಣ ಮಾಡಬೇಕು. ಈ ಮಾರ್ಗದಲ್ಲಿ ಕನಿಷ್ಠ ಅಂದರೂ 10 ದಿನ ಯಾವುದೇ ವಾಹನ ಸಂಚಾರ ಅಸಾಧ್ಯವಾಗಿದೆ.

ಇತ್ತ ಮಳೆಯ ಅಬ್ಬರಕ್ಕೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ನಗರಿ ಎಂಬ ಗ್ರಾಮದ ಜನರ ಬದುಕು ದುಸ್ತರವಾಗಿದೆ. ರಸ್ತೆಗೆ ಬೃಹತ್ ಮರ ಉರುಳಿ 10 ದಿನ ಕಳೆದಿದೆ. ಅದನ್ನು ತೆರವು ಮಾಡಲು ಅರಣ್ಯ ಇಲಾಖೆ ಮನಸ್ಸೇ ಮಾಡುತ್ತಿಲ್ಲ. ಹೀಗಾಗಿ ವಾಹನ ಸಂಚಾರ ಬಂದ್ ಆಗಿದೆ. ಜೊಯಿಡಾ ಕೇಂದ್ರದಿಂದ 4 ಕಿಮೀ ದೂರದ ನಗರಿ ಗ್ರಾಮದ ಸಂಪರ್ಕ ಕಟ್ ಆಗಿದೆ. ಪ್ರತಿ ವರ್ಷ ಮಳೆ ಬಂದಾಗಲೂ ಇಲ್ಲಿನ ಜನರ ಗೋಳು ಹೇಳತೀರದ್ದು. ಅಧಿಕಾರಿಗಳು ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಯಾರೇ ಅನಾರೋಗ್ಯಕ್ಕೊಳಗಾದರೂ ಇಲ್ಲಿನ ಜನರು ಜೋಲಿಯಲ್ಲಿ ಹೊತ್ತು ತರುವಂತಹ ಸ್ಥಿತಿ ನಿರ್ಮಾಣವಾಗಿದೆ.

Comments

Leave a Reply

Your email address will not be published. Required fields are marked *