ಪೂರ್ವ ಮುಂಗಾರು ಮಳೆಗೆ ಬೆಂಗಳೂರು ತತ್ತರ – ಒಂದೇ ಒಂದು ಮಳೆಗೆ ಕೆರೆಯಂತಾದ ರಸ್ತೆಗಳು

– ಮನೆಗೆ ನುಗ್ಗಿದ ನೀರು, ವಾಹನಗಳು ಮುಳುಗಡೆ

ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಬೆಂಗಳೂರಿನಲ್ಲಿ (Bengaluru Rains) ಶನಿವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆಯಾಗ್ತಿದ್ದಂತೆ ಮಳೆ ಅಬ್ಬರಿಸಿದೆ. ನಿನ್ನೆ ಸಂಜೆ ಸುರಿದ ಮಳೆಗೆ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.

ಎಡೆಬಿಡದೆ ಸುರಿದ ಮಳೆಯಿಂದಾಗಿ ಕೆಲಸ ಮುಗಿಸಿಕೊಂಡು ತೆರಳುತ್ತಿದ್ದ ಜನರು ಪರದಾಡಿದರು. ಭಾರೀ ಮಳೆಯಿಂದಾಗಿ ನಗರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಹೈರಾಣಾದರು. ವಿಧಾನಸೌಧ, ಎಂಜಿ ರೋಡ್, ಚಿನ್ನಸ್ವಾಮಿ ಸ್ಟೇಡಿಯಂ, ಕಾರ್ಪೊರೇಷನ್ ಸರ್ಕಲ್, ಹಲಸೂರು, ರೇಸ್ ಕೋರ್ಸ್, ಮೆಜೆಸ್ಟಿಕ್, ಶೇಷಾದ್ರಿಪುರಂ, ಮಲ್ಲೇಶ್ವರಂ ಸುತ್ತಮುತ್ತಲೂ ಮಳೆಯಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಭಾರೀ ಮಳೆ – 16 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಜಾರಿ

ಬನ್ನೇರುಘಟ್ಟ ಮುಖ್ಯರಸ್ತೆ ಮಳೆಯಿಂದ ಜಲಾವೃತಗೊಂಡಿದೆ. ಅರ್ಧ ಕಾರು ಮುಳುಗುವಷ್ಟರಮಟ್ಟಿಗೆ ರಸ್ತೆಯಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಯಿತು. ಪಣತ್ತೂರು, ಕೋರಮಂಗಲ ರಸ್ತೆಯಲ್ಲೂ ನೀರು ನಿಂತು ಅವಾಂತರ ಸೃಷ್ಟಿಯಾಯಿತು. ರಣಭೀಕರ ಮಳೆಗೆ ಬೈಕ್, ಸ್ಕೂಟರ್‌ಗಳೇ ಮುಳುಗಡೆಯಾಗಿವೆ. ನೀರಿನಲ್ಲಿ ವಾಹನಗಳು ತೇಲಾಡಿವೆ.

ನಾಗವಾರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಪರದಾಡಿದರು. ಮನೆಯಲ್ಲಿದ್ದ ವಸ್ತುಗಳೆಲ್ಲಾ ಚಲ್ಲಾಪಿಲ್ಲಿಯಾಗಿದ್ದವು. ಮಳೆ ನಿಂತ ಬಳಿಕ ಮಳೆ ನೀರನ್ನ ಹೊರಹಾಕಿದರು. ಯಲಹಂಕದ ಸಾಯಿಲೇಔಟ್ ಮತ್ತೆ ಜಲಾವೃತಗೊಂಡಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಿದ ವರುಣರಾಯ – ಎಲ್ಲೆಲ್ಲಿ ಏನಾಗಿದೆ?

ಹೆಚ್‌ಬಿಆರ್ ಲೇಔಟ್‌ನ ತಗ್ಗುಪ್ರದೇಶಗಳಲ್ಲೂ ಮನೆಗಳಿಗೆ ಮಳೆ ನೀರು ನುಗ್ಗಿ ಭಾರೀ ಅವಾಂತರ ಸೃಷ್ಟಿಯಾಯಿತು. ಮತ್ತೊಂದೆಡೆ ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತು ವಾಹನಗಳು ಮುಳುಗಡೆಯಾಗಿದ್ದವು. ಶ್ರೀರಾಂಪುರದಲ್ಲಿ ಬೃಹತ್ ಗಾತ್ರದ ಮರ ಹಾಗೂ ವಿದ್ಯುತ್ ಕಂಬವೊಂದು ಆಟೋ ಮೇಲೆ ಉರುಳಿಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆಟೋ ಚಾಲಕ ಉದಯ್ ಕುಮಾರ್ ಹಾಗೂ ಪ್ರಯಾಣಿಕರಾದ ಭಾರತಿ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಲ್ಲಿ ಬೈಕ್ ಚಾಲಕ ಗಾಯಗೊಂಡಿದ್ದಾನೆ.

ಭಾನುವಾರವೂ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಗದಗ, ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉ.ಕನ್ನಡ, ಶಿವಮೊಗ್ಗ, ಉಡುಪಿ, ದ.ಕನ್ನಡ, ಕೊಡಗು, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ ಸೇರಿದಂತೆ ಬೆಂಗಳೂರು ನಗರದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ | ಆರ್‌ಸಿಬಿ-ಕೆಕೆಆರ್‌ ಪಂದ್ಯಕ್ಕೆ ಅಡ್ಡಿ