ರಾಜ್ಯದ ಹಲವೆಡೆ ಮಳೆರಾಯನ ರುದ್ರನರ್ತನ- ಈ ಮಾರ್ಗದ ರಸ್ತೆಗಳು ಬಂದ್

ಬೆಂಗಳೂರು: ಮಳೆ ಬಂದ್ರೂ ಕಷ್ಟ, ಬರದಿದ್ರೂ ಕಷ್ಟ. ಮುಂಗಾರು ಮಳೆ ಕೈಕೊಡ್ತಲ್ಲಪ್ಪ ಅನ್ನೋ ಹೊತ್ತಲ್ಲಿ ಕರ್ನಾಟಕದ ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ.

ಚಿಕ್ಕಮಗಳೂರಲ್ಲಿ ಮಳೆಯ ಆರ್ಭಟ ನಿಲ್ತಿಲ್ಲ. ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ ಕಳಸ ಸಮೀಪದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಹೊರನಾಡು-ಕಳಸ ರಸ್ತೆ ಸಂಪರ್ಕ ಬಂದ್ ಆಗಿದೆ. ಮೂಡಿಗೆರೆ, ಶೃಂಗೇರಿ, ಎನ್.ಆರ್. ಪುರ, ಕೊಪ್ಪ, ತರೀಕೆರೆ ತಾಲೂಕುಗಳಲ್ಲಿ ವಿದ್ಯುತ್ ಕಂಬಗಳು, ಮರಗಳು ನೆಲ ಕಚ್ಚಿವೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಕಳೆದ 48 ಗಂಟೆಯಲ್ಲಿ ಭಾರೀ ಮಳೆ ಸುರಿದಿದ್ದು ಚಾಂದೇವಾಡಿ ಸೇತುವೆ ಮುಳುಗಡೆಯಾಗಿದೆ. ಬುಧವಾರ ಶಾಲೆ ಮುಗಿಸಿ ಬರ್ತಿದ್ದ 50ಕ್ಕೂ ಹೆಚ್ಚು ಮಕ್ಕಳು ನದಿ ದಡದಲ್ಲಿ ಸಿಲುಕಿದ್ರು. ರಬ್ಬರ್ ಬೋಟ್ ಬಳಸಿ ಮಕ್ಕಳನ್ನ ರಕ್ಷಿಸಲಾಯ್ತು.

ವ್ಯಕ್ತಿ ಸಾವು: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಗುಡ್ಡ ಕುಸಿತದಿಂದ ಮಲ್ಲಿಕಾರ್ಜುನ ಎಂಬ 31 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕಣಕುಂಬಿಯಲ್ಲಿ ಕಳಸ ರಸ್ತೆ ಬಂದ್ ಆಗಿದೆ. ಅಥಣಿ, ರಾಯಭಾಗ, ಚಿಕ್ಕೋಡಿ ತಾಲೂಕಿನ ಕೆಳ ಹಂತದ ಸೇತುವೆಗಳು ಮುಳುಗಡೆ ಭೀತಿಯಲ್ಲಿವೆ. ಚಿಕ್ಕೋಡಿ ತಾಲೂಕಿನ ಯಡುರ-ಕಲ್ಲೋಳ ಸೇತುವೆಗಳು ಸಹ ಜಲಾವೃತಗೊಂಡಿವೆ.

ಶಾಲೆಗೆ ರಜೆ: ಕೊಡಗು ಜಿಲ್ಲೆಯಲ್ಲಿ ಮಳೆರಾಯನ ಆರ್ಭಟದಿಂದ ಭಾಗಮಂಡಲ, ತ್ರಿವೇಣಿ ಸಂಗಮ ಭರ್ತಿಯಾಗಿದೆ. ನಾಪೋಕ್ಲು ಸುತ್ತಾಮುತ್ತಾ ಗದ್ದೆ ಜಲಾವೃತವಾಗಿದೆ. ಭಾಗಮಂಡಲ ರಸ್ತೆ ಜಲವೃತವಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಭಾರೀ ಮಳೆಯಿಂದಾಗಿ ಹಲವೆಡೆ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇವತ್ತು ಕೊಡಗು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಒಂದು ದಿನ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಆದೇಶಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ ತೀರ್ಥಹಳ್ಳಿ, ಸಾಗರದಲ್ಲಿ 83 ಮಿಲಿಮೀಟರ್ ಮಳೆಯಾಗಿದೆ. ಹೊಸನಗರದಲ್ಲಿ 110 ಮಿಲಿಮೀಟರ್ ಮಳೆಯಾಗಿದೆ. ಹಾಸನದ ಶಿರಾಡಿ ಘಾಟ್‍ನ ಕೆಂಪುಹೊಳೆ ಬಳಿ ರಾತ್ರಿ ಗುಡ್ಡ ಕುಸಿದು ಕೆಲವರಿಗೆ ಗಾಯವಾಗಿದೆ. ಧರ್ಮಸ್ಥಳ ಮಂಗಳೂರು ರಸ್ತೆ 2 ಗಂಟೆಗೂ ಹೆಚ್ಚು ಕಾಲ ಬಂದ್ ಆಗಿತ್ತು.

Comments

Leave a Reply

Your email address will not be published. Required fields are marked *