ಒಬ್ಬ ವಿದ್ಯುತ್ ಕಂಬವೇರಿ ರಕ್ಷಿಸಿ ಎಂದು ಕೂಗಿದ್ರೆ, ಮತ್ತೊಬ್ಬ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ

ಬೆಳಗಾವಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ ಯುವಕನೊಬ್ಬ ಕಾಪಾಡಿ ಎಂದು ಕೂಗಿದರೆ ಮತ್ತೋರ್ವ ನದಿಗೆ ಹಾರಿ ಹುಚ್ಚಾಟ ಮೆರೆದಿದ್ದಾನೆ.

ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ನೌಶಾದ್ ಹವಾಲ್ದಾರ್(29) ವಿದ್ಯುತ್ ದೀಪ ಕಂಬ ಹತ್ತಿ ಕುಳಿತು ಕಾಪಾಡಿ ಎಂದು ಸುಮಾರು 3 ಗಂಟೆಗಳಿಂದ ಗೋಗರೆದಿದ್ದಾನೆ. ನೌಶಾದ್, ಜಮೀನಿಗೆ ಹೋಗಿದ್ದ ವೇಳೆ ನೀರಿನ ಹರಿವು ಹೆಚ್ಚಾಗಿ ಸಿಲುಕಿಕೊಂಡಿದ್ದಾನೆ. ಹೀಗಾಗಿ ಬೆದರಿದ ಯುವಕ ವಿದ್ಯುತ್ ಕಂಬವೇರಿ ಸುಮಾರು 4 ಗಂಟೆ ಕುಳಿತಿದ್ದು, ನಂತರ ಆತನನ್ನು ರಕ್ಷಣೆ ಮಾಡಲಾಯಿತು.

ಇತ್ತ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ನದಿ ಸೇತುವೆ ಮೇಲೆ ಯುವಕನೊಬ್ಬ ತನ್ನ ಹುಚ್ಚಾಟ ಮೆರೆದಿದ್ದಾನೆ. ತುಂಬಿ ಹರಿಯುತ್ತಿದ್ದ ನದಿಗೆ ನೋಡನೋಡುತ್ತಿದ್ದಂತೆಯೇ ಹಾರಿದ್ದಾನೆ.

ಮಲಪ್ರಭಾ ನದಿ ಮೇಲಿನ ಸೇತುವೆ ಮುಳುಗಡೆಯಾಗಿದ್ದು, ನದಿ ಮೇಲೆ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಆದರೂ ಪೊಲೀಸರ ಮುಂದೆಯೇ ಯುವಕ ಸೇತುವೆಯಿಂದ ನದಿಗೆ ಹಾರಿದ್ದಾನೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಯುವಕನನ್ನು ರಕ್ಷಣೆ ಮಾಡಿದ್ದಾರೆ. ರಕ್ಷಣೆಯ ಬಳಿಕ ಯುವಕನಿಗೆ ಪೊಲೀಸರು ಬೆತ್ತದ ರುಚಿ ತೋರಿಸಿದ್ದಾರೆ.

ನಗರದಲ್ಲಿ ಮಳೆರಾಯನ ಅಬ್ಬರ ಮುಂದುವರಿದಿದ್ದರಿಂದ ಏರ್ ಪೋರ್ಟ್ ರೋಡ್ ನಲ್ಲಿರುವ ಪೋದ್ದಾರ ಶಾಲೆಗೆ ನೀರು ನಿಗಿ ಅವಾಂತರ ಸೃಷ್ಟಿಯಾಗಿದೆ. ನೀರಿನಿಂದಾಗಿ ಶಾಲೆ ಭಾಗಶಃ ಮುಳುಗಿದೆ. ಇತ್ತ ಬಸವನ ಕುಡಚಿಯಲ್ಲಿ ವೀರಭದ್ರೇಶ್ವರ ದೇವಸ್ಥಾನಕ್ಕೂ ನೀರು ನುದ್ದಿದೆ. ಕೆಎಲ್‍ಇ ಟೆಂಡಲ್ ಕಾಲೇಜಿನಲ್ಲಿ ನಿಂತಿದ್ದ ಕಾಲೇಜು ವಾಹನದ ಮೇಲೆ ಬಿದ್ದ ಬೃಹತ್ ಮರ ಬಿದ್ದಿದೆ. ವಾಹನದಲ್ಲಿ ವಿದ್ಯಾರ್ಥಿಗಳು ಇಲ್ಲದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಆದರೆ ಬಸ್ ನಲ್ಲೇ ಕುಳಿತಿದ್ದ ಡ್ರೈವರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ತಳಕಟನಾಳ ಗ್ರಾಮ ಕೂಡ ಜಲಾವೃತವಾಗಿದ್ದು 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ನಿರಾಶ್ರಿತರಿಗೆ ಸರ್ಕಾರಿ ಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ದೇವಸ್ಥಾನ ಹಾಗೂ ಸರ್ಕಾರಿ ಹೈಸ್ಕೂಲ್ ನೀರು ನುಗ್ಗಿದೆ. ಸ್ಥಳೀಯ ಅರಭಾವಿ ಕ್ಷೇತ್ರ ಶಾಸಕ ಬಾಲಚಂದ್ರ ಜಾರಕಿಹೊಳಿ ಗ್ರಾಮಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ಘಟಪ್ರಭಾ ನದಿಗೆ ಪ್ರವಾಹ ಬಂದ ಹಿನ್ನೆಲೆಯಲ್ಲಿ ಇಡೀ ಗ್ರಾಮವೇ ಜಲಾವೃತವಾಗಿದೆ.

Comments

Leave a Reply

Your email address will not be published. Required fields are marked *