ರಣಮಳೆಗೆ ನ್ಯಾಷನಲ್ ಹೈವೇ ಜಲಾವೃತ -ವಾಹನಗಳ ಮುಳುಗಡೆ, ಕೋರಮಂಗಲದಲ್ಲಿ ನದಿಯಂತಾದ ರಸ್ತೆ

ಬೆಂಗಳೂರು: ನವರಾತ್ರಿ ವೇಳೆ ರಣಚಂಡಿ ಮಳೆಗೆ ಬೆಂಗಳೂರು ಬೆಚ್ಚಿಬಿದ್ದಿದೆ. ಸಿಲಿಕಾನ್ ಸಿಟಿಯಲ್ಲಿ ರಾತ್ರಿಯಿಡಿ ನಿರಂತರವಾಗಿ ಭಾರಿ ಮಳೆ ಆಗಿದೆ. ರಾತ್ರಿ 10.30 ರಿಂದ ಬೆಳಗಿನ ಜಾವದವರೆಗೂ ಬಿಟ್ಟುಬಿಡದೇ ದಾಖಲೆಯ ಮಳೆ ಸುರಿದಿದೆ. ಇದರ ಪರಿಣಾಮ ಕೋರಮಂಗಲದ ಎನ್‍ಜಿವಿ ಗೇಟ್ ಬಳಿಯ ಪ್ರಮುಖ ರಸ್ತೆ ನದಿಯಂತಾಗಿಬಿಟ್ಟಿದೆ. ತುಂಬಿ ಹರಿಯುತ್ತಿರುವ ರಸ್ತೆಯಲ್ಲೇ ವಾಹನಗಳು ಮಂದಗತಿಯಲ್ಲಿ ಸಾಗುತ್ತಿವೆ. ಅಶಕ್ತರು, ಮಕ್ಕಳು ಈ ರಸ್ತೆಯಲ್ಲಿ ಸಾಗಿದ್ರೆ ಕೊಚ್ಚಿಕೊಂಡು ಹೋಗೋದು ಗ್ಯಾರಂಟಿ. ನೀರಿನ ರಭಸ ಅಷ್ಟು ಪ್ರಮಾಣ ಇದೆ.

ಇತ್ತ ನೆಲಮಂಗಲ ಬಳಿಯ ಬಿನ್ನಮಂಗಲ ಕೆರೆ ತುಂಬಿ ಕೋಡಿ ಬಿದ್ದ ಪರಿಣಾಮ ಕಳೆದೊಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ರಾಷ್ಟ್ರೀಯ ಹೆದ್ದಾರಿ ನಾಲ್ಕು ಮುಳುಗಡೆಯಾಗಿದೆ. ಬಸ್ಸು, ಲಾರಿ ಸೇರಿದಂತೆ ಹಲವು ವಾಹನಗಳು ಮುಳುಗಡೆಯಾಗಿವೆ. ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ದೊಡ್ಡಬಿದರಕಲ್ಲಿನ ಕೆರೆ ಒಡೆದಿದ್ದು ಅಂದಾನಪ್ಪ ಲೇಔಟ್ ನದಿಯಂತಾಗಿಬಿಟ್ಟಿದೆ. ನದಿಯೋಪಾದಿಯಲ್ಲಿ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ಹರಿಯುತ್ತಿದೆ. ಮನೆಗಳಿಗೆಲ್ಲಾ ನೀರು ನುಗ್ಗಿದ್ದು, ಸ್ಥಳೀಯರು ಪರದಾಡ್ತಿದ್ದಾರೆ.

ಜೆ.ಪಿ ನಗರದ ಐದನೇ ಬ್ಲಾಕ್‍ನಲ್ಲಿರುವ ಶಾಕಾಂಬರಿ ನಗರದಲ್ಲಿರುವ ಶೋಭಾ ಡಿಪ್ಲೋರ್ ಅಪಾರ್ಟ್‍ಮೆಂಟ್‍ನ ಕಾಂಪೌಂಡ್ ಪಕ್ಕದ ಮನೆಯ ಮೇಲೆ ಕುಸಿದುಬಿದ್ದಿದೆ. ತಡರಾತ್ರಿ 2 ಗಂಟೆಗೆ ಅವಘಡ ಸಂಭವಿಸಿದ್ದು, ಮನೆ ಬಾಗಿಲಿಗೆ ಸರಿಯಾಗಿ ಕಾಂಪೌಂಡ್ ಬಂದಿದೆ. ನಾಲ್ವರು ಮನೆಯಲ್ಲೇ ಸಿಲುಕಿದ್ದು, ಬೆಳಗ್ಗೆ ಬಂದ ಅಧಿಕಾರಿಗಳು ಜೆಸಿಬಿ ಮೂಲಕ ಕಾರ್ಯಾಚರಣೆ ಮಾಡಿ ನಾಲ್ವರನ್ನು ರಕ್ಷಿಸಿದ್ದಾರೆ. ಇನ್ನು ಎಂದಿನಂತೆ ಈ ಬಾರಿಯೂ ಕೋರಮಂಗಲ ಸಮೀಪದ ಎಸ್‍ಟಿ ಬೆಡ್ ಲೇಔಟ್ ಜಲಾವೃತವಾಗಿದೆ. ಅಪಾರ್ಟ್‍ಮೆಂಟ್‍ಗಳೆಲ್ಲಾ ಜಲಮಯವಾಗಿವೆ. ಎಲ್ಲೆಲ್ಲೂ ನೀರೇ ಕಂಡುಬರ್ತಿದೆ. ಗಾರೆಪಾಳ್ಯದಲ್ಲಿ ಪ್ರವಾಹ ಸ್ಥಿತಿಯನ್ನು ನೆನಪಿಸುವ ವಾತಾವರಣ ಇದೆ. ಇಡೀ ಗಾರೆಪಾಳ್ಯದಲ್ಲಿ ಎಲ್ಲಿ ನೊಡಿದ್ರೂ ನೀರೋ ನೀರು. ಇಲ್ಲಿನ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಜನ ಪರದಾಡ್ತಾ ಇದ್ದಾರೆ.

ಮಳೆ ಬಂತು ಅಂದ್ರೆ ಸಾಕು ಶೇಷಾದ್ರಿ ರಸ್ತೆಯ ರೈಲ್ವೇ ಅಂಡರ್‍ಪಾಸ್ ಮತ್ತು ಶಿವಾನಂದ ವೃತ್ತದ ಅಂಡರ್ ಪಾಸ್ ಮುಳುಗಡೆ ಆಗುತ್ತಿದ್ದವು. ವಾಹನಗಳು ನೀರಲ್ಲಿ ಸಿಲುಕಿ ಸವಾರರು ಪರದಾಡ್ತಿದ್ರು. ಆದ್ರೆ ನಿನ್ನೆ ರಾತ್ರಿ ರಣಚಂಡಿ ಮಳೆ ಸುರಿದ್ರೂ ಈ ಅಂಡರ್‍ಪಾಸ್‍ಗಳಲ್ಲಿ ಮಳೆ ನೀರು ನಿಂತಿರಲಿಲ್ಲ. ಬಿಬಿಎಂಪಿ ಸಿಬ್ಬಂದಿ ಸಕಾಲಕ್ಕೆ ಈ ಭಾಗದ ಚರಂಡಿ ಕ್ಲೀನ್ ಮಾಡಿದ್ದ ಕಾರಣ ನೀರು ಸರಾಗವಾಗಿ ಹರಿಯುತ್ತಿತ್ತು. ವಾಹನಗಳು ಸಹ ಸರಾಗವಾಗಿ ಚಲಿಸ್ತಿದ್ದವು.

ಇನ್ನು ಮಾರುತಿ ಲೇಔಟ್‍ನಲ್ಲಿ ಗೋಡೆ ಕುಸಿದುಬಿದ್ದ ಬೆನ್ನಲ್ಲೇ, ಚಂದ್ರಾಲೇಔಟ್‍ನ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿನ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಮಲಗಲು ಜಾಗ ಇಲ್ಲದೇ ಇಲ್ಲಿನ ಜನ ರಾತ್ರಿಯಿಡಿ ನಿದ್ದೆಗೆಡುವಂತಾಯ್ತು. ಧವಸಧಾನ್ಯಗಳು ನೀರು ಪಾಲಾದವು. ಮನೆಗಳಿಂದ ನೀರನ್ನು ಎತ್ತಿ ಹಾಕಿ ಜನ ಸುಸ್ತಾದ್ರು. ಇದೇ ವೇಳೆ ಕೆಆರ್ ಪುರಂನ ಭೀಮಯ್ಯ ಬಡಾವಣೆಯಂತೂ ಸಂಪೂರ್ಣ ಜಲಾವೃತವಾಗಿದೆ. ಬಡಾವಣೆಯ ತುಂಬಾ ಮೊಣಕಾಲುದ್ದ ನೀರು ನಿಂತಿದೆ. ಲೇಔಟ್‍ನ ಗ್ರೌಂಡ್‍ಫ್ಲೋರ್ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯೆಲ್ಲಾ ಜಾಗರಣೆ ಮಾಡುವಂತಾಯ್ತು. ಮೂರ್ನಾಲ್ಕು ಅಡಿವರೆಗೂ ಹರಿಯುತ್ತಿದ್ದ ನೀರಲ್ಲಿ ಕಾರುಗಳು ಪ್ರಯಾಸಪಟ್ಟು ಚಲಿಸ್ತಾ ಇದ್ದಿದ್ದು ಕಂಡುಬಂತು.

 

 

Comments

Leave a Reply

Your email address will not be published. Required fields are marked *