ಮಳೆಯಿಂದಾಗಿ ರಸ್ತೆ ಬದಿ ತಡೆಗೋಡೆ ಏರಿದ ಸಾರಿಗೆ ಬಸ್ – ತಪ್ಪಿದ ಭಾರೀ ಅನಾಹುತ

ಬಾಗಲಕೋಟೆ: ನಗರದಲ್ಲಿ ಸಂಜೆ ವೇಳೆಗೆ ಸುರಿದ ಭಾರೀ ಮಳೆಗೆ ರಸ್ತೆಗಳೆಲ್ಲಾ ನೀರಿನಿಂದ ತುಂಬಿ ಕೆರೆಯಂತಾಗಿದ್ದು, ಈ ವೇಳೆ ಬಸ್ ಒಂದು ರಸ್ತೆ ಬದಿಯ ತಡೆಗೋಡೆ ಏರಿದ ಘಟನೆ ನಗರದ ಬಗಿನಿ ಸಮಾಜ ಬಳಿ ರಸ್ತೆಯಲ್ಲಿ ಘಟನೆ ನಡೆದಿದೆ.

ಬಾಗಲಕೋಟೆಯಿಂದ ನವನಗರಕ್ಕೆ ಹೊರಟಿದ್ದ ವೇಳೆ ಮಳೆಗೆ ರಸ್ತೆ ಕಾಣದೆ ಚಾಲಕ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬಸ್ ತಡೆಗೋಡೆ ಏರಿ ಸ್ಥಳದಲ್ಲೇ ನಿಂತಿದೆ. ಈ ವೇಳೆ ಸ್ಥಳದಲ್ಲಿದ್ದ ಕೆಲ ಸ್ಥಳೀಯರು ಪ್ರಯಾಣಿಕರನ್ನು ಬಸ್ ನಿಂದ ಕೆಳಕ್ಕೆ ಇಳಿಸಿ ಸಹಾಯ ಮಾಡಿದ್ದಾರೆ. ಇದರಿಂದ ನಡೆಯಬಹುದಾಗಿದ್ದ ಅಪಾಯ ಕೂದಳೆಲೆ ಅಂತರದಲ್ಲಿ ತಪ್ಪಿದೆ. ಘಟನೆ ಬಾಗಲಕೋಟೆ ಶಹರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಿಲ್ಲೆಯ ಬಾಗಲಕೋಟೆ, ಮುಧೋಳ, ಜಮಖಂಡಿ, ಹುನಗುಂದ, ಬಾದಾಮಿ ಹಾಗೂ ಬೀಳಗಿ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ವರ್ಷದ ಮೊದಲ ಮಳೆಗೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಮೃಗಶಿರಾ ಮಳೆಯಿಂದ ಸಂತಸಗೊಂಡ ರೈತರು ಬೀಜ ಬಿತ್ತನೆಗೆ ಸಿದ್ಧತೆ ನಡೆಸಲು ಮುಂದಾಗಿದ್ದಾರೆ.

ಇನ್ನು ಬೆಳಗಾವಿಯ ಹುಕ್ಕೇರಿಯಲ್ಲಿ ಪಟ್ಟಣ ಸುತ್ತ ಮುತ್ತ ಭಾರೀ ಮಳೆಯಾಗಿದ್ದು, ಸತತ ಎರಡು ಗಂಟೆ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲದೇ ಪಟ್ಟಣದ ಬಹುತೇಕ ರಸ್ತೆಗಳು ಜಲಾವೃತವಾಗಿದಲ್ಲದೇ ಕೆಲ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರಕ್ಕೆ ಕಾರಣವಾಗಿತ್ತು.

Comments

Leave a Reply

Your email address will not be published. Required fields are marked *