ನಾಳೆಯ ಟಿಪ್ಪು ಜಯಂತಿಗೆ ಇಂದಿನಿಂದ್ಲೇ ನಿಷೇಧಾಜ್ಞೆ – ಮಡಿಕೇರಿಯಲ್ಲಿ ಎಲ್ಲಿ ನೋಡಿದ್ರೂ ಪೊಲೀಸರು

ಮಡಿಕೇರಿ: ನ10 ಕೊಡಗಿನ ಪಾಲಿನ ಸವಾಲಿನ ದಿನವಾಗಲಿದೆ. ಒಂದೆಡೆ ನ.10ರ ಟಿಪ್ಪು ಜಯಂತಿ ವಿರೋಧಿಸಿ ಕೊಡಗು ಬಂದ್ ಹಾಗೂ ಕುಟ್ಟಪ್ಪ ಹುತಾತ್ಮ ದಿನವನ್ನು ಹಮ್ಮಿಕೊಂಡಿರುವುದಾಗಿ ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿ ಘೋಷಿಸಿದ್ದರೆ, ಇತ್ತ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿರುವ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಎಂತಹ ಪರಿಸ್ಥಿತಿ ಬಂದರೂ ಎದುರಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಜ್ಜಾಗಿದ್ದು, ಹೆಚ್ಚಿನ ಪೊಲೀಸ್ ಫೋರ್ಸ್ ಮೂಲಕ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಜಿಲ್ಲಾಡಳಿತ ಮುಂದಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಜಿಲ್ಲೆಯ 10 ಗಡಿ ಚೆಕ್ ಪೋಸ್ಟ್ ಗಳಲ್ಲಿ ತಲಾ 4 ಸಿಸಿ ಕ್ಯಾಮೆರಾ ಅಳವಡಿಸಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

ಜಿಲ್ಲೆಯ ಒಳಭಾಗದ 31 ಕಡೆಗಳಲ್ಲಿ ನಾಕಾಬಂಧಿ ಹಾಕಿ ವಾಹನ ತಪಾಸಣೆ, ವಾಹನ ನೋಂದಣಿ ಹಾಗೂ ಚಾಲಕರ ಮಾಹಿತಿ ಕಲೆಹಾಕಲಾಗುತ್ತಿದೆ. ಜಿಲ್ಲೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ನಿಗಾ ಇಡಲಾಗಿದೆ. ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 8 ಡಿವೈಎಸ್‍ಪಿ, 23 ಪೊಲೀಸ್ ಇನ್ಸ್ ಪೆಕ್ಟರ್, 68 ಸಬ್ ಇನ್ಸ್ ಪೆಕ್ಟರ್, 113 ಎಎಸ್‍ಐ, 1500 ಹೆಚ್‍ಸಿ/ಪಿಸಿ, 27 ಡಿಎಆರ್ ತುಕಡಿಗಳು, 15 ಕೆಎಸ್‍ಆರ್‍ಪಿ ತುಕಡಿಗಳು ಹಾಗೂ ಕ್ಷಿಪ್ರ ಕಾರ್ಯಚರಣೆ ಪಡೆಯನ್ನ ನಿಯೋಜಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ವಿವಾದ ಕಾವೇರತೊಡಗುತ್ತಿರುವಂತೆಯೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ನವೆಂಬರ್ 9 ರಂದು ಬೆಳಗ್ಗೆ 6 ಗಂಟೆಯಿಂದ ನವೆಂಬರ್ 11 ರ ಬೆಳಿಗ್ಗೆ 6 ಗಂಟೆಯವರೆಗೆ ಸೆಕ್ಷನ್ 144 ರಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಅದೇಶಿಸಿದೆ. ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಪರ-ವಿರೋಧ ಹೇಳಿಕೆ ಮತ್ತು ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಅದೇಶವನ್ನು ಜಾರಿಗೊಳಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮ, ಮದುವೆ ಸಮಾರಂಭಗಳು ಹಾಗೂ ಕುಶಾಲನಗರದ ಗೂಂಡುರಾವ್ ಬಡಾವಣೆಯಲ್ಲಿ ನಡೆಯುವ ಜಾತ್ರೆಯನ್ನು ಹೊರತುಪಡಿಸಿದಂತೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಟಿಪ್ಪು ಜಯಂತಿ ಹಿನ್ನಲೆ ಕೊಡಗು ಜಿಲ್ಲೆಯ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದಷ್ಟ್ಟು ಖಾಕಿ ಕಣ್ಗಾವಲಿನ ವ್ಯವಸ್ಥೆ ಮಾಡಲಾಗಿದ್ದು, ಬಂದೋಬಸ್ತಿನ ಉಸ್ತುವಾರಿಯನ್ನು ಐಜಿಪಿ ದರ್ಜೆಯ ಅಧಿಕಾರಿ ನೋಡಿಕೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ಎಂತಹ ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿರುವ ಜಿಲ್ಲಾಡಳಿತ, ಕಾನೂನು ಸುವ್ಯವಸ್ಥೆ ಕಾಪಾಡಲು ಟೊಂಕ ಕಟ್ಟಿ ನಿಂತಿದೆ.

Comments

Leave a Reply

Your email address will not be published. Required fields are marked *