ಇಂದು ಒಂದೇ ದಿನದಲ್ಲಿ 941 ಮಂದಿಗೆ ಸೋಂಕು, 37 ಜನರ ಸಾವು

– ಧಾರಾವಿಯಲ್ಲಿ 60 ವೈರಸ್ ಪೀಡಿತರು

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ತೀವ್ರತೆ ಕ್ಷಣ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಮುಖ್ಯವಾಗಿ ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ತಾನ, ಗುಜರಾತ್‍ನಲ್ಲಿ ಸೋಂಕಿನ ತೀವ್ರತೆ ಅಧಿಕವಾಗಿದೆ.

ದೇಶದಲ್ಲಿ ಗುರುವಾರ ಒಂದೇ ದಿನದಲ್ಲಿ 941 ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 13 ಸಾವಿರ ದಾಟಿದೆ. ಇಂದು 37 ಮಂದಿ ಸಾವನ್ನಪ್ಪಿದ್ದು, ಕೊರೊನಾಗೆ ಬಲಿಯಾದವರ ಸಂಖ್ಯೆ 430 ದಾಟಿದೆ. ಮುಂಬೈನ ಧಾರಾವಿಯಲ್ಲಿ ಸೋಂಕು ಹರಡುತ್ತಿರುವ ವೇಗ ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಇಂದು 11 ಮಂದಿಗೆ ಇಲ್ಲಿ ವೈರಸ್ ಹಬ್ಬಿದ್ದು, ಸೋಂಕಿತರ ಸಂಖ್ಯೆ 60 ದಾಟಿದೆ. 7 ಮಂದಿ ಕೇವಲ ಈ ಕೊಳಗೇರಿಯಲ್ಲಿಯೇ ಸಾವನ್ನಪ್ಪಿದ್ದಾರೆ.

ಕೊರೊನಾದ ಮತ್ತೊಂದು ಡೇಂಜರ್ ಹಾಟ್‍ಸ್ಪಾಟ್ ಎಂದ್ರೆ ಮಧ್ಯಪ್ರದೇಶದ ಇಂದೋರ್. ಸೋಂಕು ತಗುಲಿದ 980 ಮಂದಿಯಲ್ಲಿ 550ಕ್ಕೂ ಹೆಚ್ಚು ಮಂದಿ ಇಂದೋರ್‌ಗೆ ಸೇರಿದವರಾಗಿದ್ದಾರೆ. ಇಲ್ಲಿ ಕೇವಲ ಬುಧವಾರ ಒಂದೇ ದಿನ 117 ಮಂದಿಗೆ ಸೋಂಕು ತಗುಲಿದೆ. ಮೃತ 53 ಮಂದಿ ಪೈಕಿ 37 ಮಂದಿ ಇದೇ ನಗರಕ್ಕೆ ಸೇರಿದವರಾಗಿದ್ದಾರೆ.

ದೇಶದಲ್ಲಿ ಕೊರೊನಾ ಸಾವುಗಳು ಶೇಕಡಾ 3ರಷ್ಟಿದೆ. ಆದರೆ ಇಂದೋರ್ ನಲ್ಲಿ ಮಾತ್ರ ಡಬಲ್ ಇರುವುದು ಆತಂಕ ಮೂಡಿಸಿದೆ. ಕೇರಳದಲ್ಲಿ ಮಾತ್ರ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಕುಸಿದಿದೆ. ಚೀನಾದಿಂದ ಭಾರತಕ್ಕೆ 6.5 ಲಕ್ಷ ಮೆಡಿಕಲ್ ಕಿಟ್, ವೈದ್ಯಕೀಯ ಸಾಮಾಗ್ರಿಯನ್ನು ಹೊತ್ತ ವಿಮಾನ ಬೀಜಿಂಗ್‍ನಿಂದ ದೆಹಲಿಗೆ ಹೊರಟಿದೆ. ಆದರೆ ಕಳೆದ ವಾರ ಭಾರತಕ್ಕೆ ಚೀನಾ ಕಳಿಸಿದ್ದ 1.70 ಲಕ್ಷ ಪಿಪಿಇ ಕಿಟ್‍ಗಳ ಪೈಕಿ ಶೇಕಡಾ 30ರಷ್ಟು ಕೆಲಸವೇ ಮಾಡುತ್ತಿಲ್ಲ. ಕಳಪೆಯಾಗಿವೆ ಎನ್ನಲಾಗಿದೆ. ಈ ಮಧ್ಯೆ, ಏಪ್ರಿಲ್ 20ರಿಂದ ಆನ್‍ಲೈನ್ ಶಾಪಿಂಗ್‍ಗೆ ಅವಕಾಶ ನೀಡಲಾಗಿದೆ.

ಜಗತ್ತಿನಲ್ಲಿ ಕೊರೊನಾ:
ವಿಶ್ವಾದ್ಯಂತ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಜಗತ್ತಿನಲ್ಲಿ ಸೋಂಕಿತರ ಸಂಖ್ಯೆ 21 ಲಕ್ಷ ದಾಟಿದೆ. 1.36 ಲಕ್ಷ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಅಮೆರಿಕದಲ್ಲಿ ಕೊರೊನಾಗೆ ಬುಧವಾರ ಒಂದೇ ದಿನ 2,500ಕ್ಕೂ ಹೆಚ್ಚು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 29 ಸಾವಿರ ದಾಟಿದೆ. ಸ್ಪೇನ್‍ನಲ್ಲಿ ಮೃತರ ಸಂಖ್ಯೆ 20 ಸಾವಿರ ಸಮೀಪಿಸಿದೆ. ಇಟಲಿಯಲ್ಲಿ 22 ಸಾವಿರ ಮಂದಿ, ಫ್ರಾನ್ಸ್ ನಲ್ಲಿ 17 ಸಾವಿರ ಮಂದಿ, ಬ್ರಿಟನ್‍ನಲ್ಲಿ 13 ಸಾವಿರ ಮಂದಿ ಬಲಿಯಾಗಿದ್ದಾರೆ.

ಇಟಲಿಯಲ್ಲಿ ಸಾವುಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಚೀನಾದಲ್ಲಿ ಕೊರೊನಾಗಾಗಿಯೇ ನಿರ್ಮಿಸಲಾಗಿದ್ದ ಸಾವಿರ ಹಾಸಿಗೆಗಳ ಆಸ್ಪತ್ರೆ ಮುಚ್ಚಲಾಗಿದೆ. ಕೊರೊನಾದಿಂದ ಅತೀ ಹಿರಿಯ ಅಜ್ಜಿಯೊಬ್ಬರು ಚೇತರಿಸಿಕೊಂಡಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿದ್ದ 106 ವರ್ಷದ ವೃದ್ಧೆ ಬರ್ಮಿಂಗ್ ಹ್ಯಾಮ್ ಆಸ್ಪತ್ರೆಯಿಂದ 3 ವಾರದ ಬಳಿಕ ಡಿಸ್ಚಾರ್ಜ್ ಆಗಿದ್ದಾರೆ.

Comments

Leave a Reply

Your email address will not be published. Required fields are marked *