ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ವೇವ್ ಘಟಕ ಸ್ಥಾಪಿಸಲು ನಡ್ಡಾ ಸೂಚನೆ

ನವದೆಹಲಿ: ಬಿಸಿಗಾಳಿಯಿಂದ ಬಾಧಿತರಾದವರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಎಲ್ಲಾ ಆಸ್ಪತ್ರೆಗಳು ಸನ್ನದ್ಧವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ (JP Nadda) ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರ ಸರ್ಕಾರಿ ಆಸ್ಪತ್ರೆಗಳ ಬಿಸಿಗಾಳಿ ಪರಿಸ್ಥಿತಿ ಮತ್ತು ಸನ್ನದ್ಧತೆಯನ್ನು ಪರಿಶೀಲಿಸಿದ ನಡ್ಡಾ, ಆ ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ವೇವ್ ಘಟಕಗಳನ್ನು (Heat Wave Unit) ಪ್ರಾರಂಭಿಸಲು ನಿರ್ದೇಶನ ನೀಡಿದರು.

ಭಾರತೀಯ ಹವಾಮಾನ ಇಲಾಖೆ (IMD) ಬುಧವಾರದಂದು ಉತ್ತರ ಭಾರತದ ಹಲವು ಭಾಗಗಳಲ್ಲಿ ಬಿಸಿಗಾಳಿಯಿಂದ ತೀವ್ರ ಶಾಖದ ಅಲೆಗಳು ಮುಂದುವರಿಯುವ ಸಾಧ್ಯತೆಯಿದೆ. ವಾಯುವ್ಯ ಭಾರತದ ಕಡೆಗೆ ಪಶ್ಚಿಮದ ಅಡಚಣೆಯಿಂದಾಗಿ ಕ್ರಮೇಣ ಕಡಿಮೆಯಾಗುತ್ತದೆ ಎಂದು ಹೇಳಿದೆ. ಇದನ್ನೂ ಓದಿ: 54ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ರಾಹುಲ್‌ ಗಾಂಧಿ

ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಶಂಕಿತ ಹೀಟ್ ಸ್ಟ್ರೋಕ್ ನಿಂದ ಐದು ಸಾವುಗಳು ವರದಿಯಾಗಿದೆ. ಕನಿಷ್ಠ 12 ಮಂದಿ ಬಹುತೇಕ ದಿನಗೂಲಿ ಕಾರ್ಮಿಕರು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೆಹಲಿಯ ಇತರ ಆಸ್ಪತ್ರೆಗಳಲ್ಲಿಯೂ ಇದೇ ರೀತಿ ಬಿಸಿಲಿನ ಆಘಾತಕ್ಕೊಳಗಾದ ವಿವಿಧ ರೋಗಿಗಳು ದಾಖಲಾಗಿದ್ದಾರೆ.

ಜೂನ್ 30 ರಂದು ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ (NCR) ಮುಂಗಾರು ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಐಎಂಡಿ ಭವಿಷ್ಯ ನುಡಿದಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ತಾಪಮಾನವು ಸುಮಾರು 40 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ. ಮಾನ್ಸೂನ್ ಜೂನ್‌ನಲ್ಲಿ ದೆಹಲಿ-ಎನ್‌ಸಿಆರ್‌ಗೆ ಅಪ್ಪಳಿಸುವ ನಿರೀಕ್ಷೆಯಿದೆ ಎಂದು IMD ವಿಜ್ಞಾನಿ ಡಾ. ನರೇಶ್ ಕುಮಾರ್ ತಿಳಿಸಿದ್ದಾರೆ.

ಅಂಕಿಅಂಶಗಳ ಪ್ರಕಾರ, ಮಂಗಳವಾರ ಮಧ್ಯಾಹ್ನ 3:22 ಕ್ಕೆ, ದೆಹಲಿಯ ಗರಿಷ್ಠ ವಿದ್ಯುತ್ ಬೇಡಿಕೆ 8,647 MW ಆಗಿತ್ತು. ಇದು ರಾಷ್ಟ್ರ ರಾಜಧಾನಿಯ ಇತಿಹಾಸದಲ್ಲಿ ಅತ್ಯಧಿಕವಾಗಿದೆ. ಬಿಸಿಗಾಳಿಯು ದೆಹಲಿಯಲ್ಲಿ ನೀರಿನ ಬಿಕ್ಕಟ್ಟನ್ನು ಉಲ್ಬಣಗೊಳಿಸಿದೆ, ನಿವಾಸಿಗಳು ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಬೇಕಾಯಿತು.