ಮೋದಿಗೂ ಅಚ್ಚುಮೆಚ್ಚು ತಾವರೆ ಬೀಜ – ದಿನ ಬಳಸೋದ್ರಿಂದ ಆರೋಗ್ಯಕ್ಕೆ ಆಗೋ ಪ್ರಯೋಜನವೇನು?

ಮ್ಮ ಬಾಯಿ ರುಚಿಗೆ ದಿನನಿತ್ಯ ನಾವು ಒಂದಲ್ಲ ಒಂದು ರೀತಿಯ ತಿಂಡಿಯ ಮೊರೆ ಹೋಗ್ತೇವೆ, ಅದರಲ್ಲಿ ಎಷ್ಟೋ ರಾಸಾಯನಿಕ ಬಳಸಿ ತಯಾರಿಸಿದ್ದಾಗಿರುತ್ತವೆ. ಅಂತಹ ಆರೋಗ್ಯಕ್ಕೆ ಹೊಂದದ ಆಹಾರ ಬದಿಗಿಟ್ಟು, ಆರೋಗ್ಯಕ್ಕೆ ಒಗ್ಗುವ ಉತ್ತಮವಾದ ನೈಸರ್ಗಿಕವಾದ ತಿಸಿಸೊಂದರ ಬಗ್ಗೆ ತಿಳಿದುಕೊಳ್ಳೋಣ. ಅದೇ ಈ ʻತಾವರೆ ಬೀಜಗಳುʼ ಪುಟ್ಟ ಶಕ್ತಿಶಾಲಿ ಬೀಜಗಳಲ್ಲಿ ಅದೆಂತಹ ಶಕ್ತಿ ಇದೆ ಅಂದ್ರೆ ಇದಕ್ಕೆ ಪ್ರಧಾನಿ ಮೋದಿಯೇ ಮನಸೋತಿದ್ದಾರೆ.

ತಾವರೆ ಬೀಜಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಮೆಗ್ನೀಷಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಮನುಷ್ಯನ ದೇಹಕ್ಕೆ ಅಗತ್ಯವಿರುವ ಖನಿಜಗಳನ್ನು ಹೊಂದಿದೆ. ಕೊಲೆಸ್ಟ್ರಾಲ್ ಮಟ್ಟ ಸಮತೋಲನಗೊಳಿಸಲು ಮತ್ತು ಹೃದಯವನ್ನು ಆರೋಗ್ಯವಾಗಿಡಲು ಪೊಟ್ಯಾಸಿಯಮ್ ಸಹಾಯಮಾಡುತ್ತದೆ. ವಿಟಮಿನ್ ಎ, ಬಿ1, ಸಿ ಸಹ ಇದರಲ್ಲಿದ್ದು, ಪ್ರತಿದಿನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾಗಿದೆ.

ತಾವರೆ ಬೀಜಗಳ ಬಗ್ಗೆ ಮೋದಿ ಹೇಳಿದ್ದೇನು?
ಇತ್ತೀಚೆಗೆ ಪ್ರಧಾನಿ ಮೋದಿಯವರು ಬಿಹಾರದ ರ‍್ಯಾಲಿಯಲ್ಲಿ ಮಾತನಾಡುವಾಗ, ವರ್ಷದ 300 ದಿನಗಳ ಕಾಲ ತಾವರೆಯ ಬೀಜಗಳನ್ನು ಸೇವಿಸುವುದಾಗಿ ಹೇಳಿದ್ದರು. ಅಲ್ಲದೇ, ಈ ಆಹಾರವನ್ನು ಸೂಪರ್‌ ಫಾಸ್ಟ್‌ ಫುಡ್‌ ಆಗಿ ವಿಶ್ವಕ್ಕೆ ಪರಿಚಯಿಸುವ ಅಗತ್ಯವಿದೆ ಎಂದಿದ್ದರು.

ಮಖಾನ ಮಂಡಳಿ – ಕೇಂದ್ರ ಬಜೆಟ್‌ನಲ್ಲಿ ಘೋಷಣೆ
ಇನ್ನೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರಂದು ಮಂಡಿಸಿದ್ದ ಬಜೆಟ್‌ನಲ್ಲಿ, ಬಿಹಾರದಲ್ಲಿ ವಿಶೇಷ ಮಖಾನಾ ಮಂಡಳಿಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. ಇದು ರಾಜ್ಯದಲ್ಲಿ ಮಖಾನಾದ ಉತ್ಪಾದನೆ, ಮಾರುಕಟ್ಟೆ, ಮೌಲ್ಯವರ್ಧನೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಸೂಪರ್‌ ಮಾರ್ಕೇಟ್‌ನಲ್ಲಿ ತಾವರೆಯ ಬೀಜಗಳು ಮಾರಟಕ್ಕೆ ಲಭ್ಯವಿದ್ದು, ಅತೀ ಹೆಚ್ಚು ಬೇಡಿಕೆ ಇರುವ ಆಹಾರ ಪದಾರ್ಥವಾಗಿದೆ. ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಕಡಿಮೆ ಇರುವುದರಿಂದ, ಇದು ತಿನ್ನಲು ರುಚಿಯಾಗಿದೆ. ಇತ್ತೀಚೆಗೆ ಸೂಪರ್‌ಮಾರ್ಕೆಟ್‌ಗಳಲ್ಲಿ ವಿವಿಧ ರುಚಿಯಲ್ಲಿಯೂ ತಾವರೆಯ ಬೀಜಗಳು ಲಭ್ಯವಿದೆ.

ತಾವರೆಯ ಬೀಜಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭ?
ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಗ್ಯಾಲಿಕ್ ಆಮ್ಲ, ಕ್ಲೋರೊಜೆನಿಕ್ ಆಮ್ಲ ಮತ್ತು ಎಪಿಕಾಟೆಚಿನ್ ನಂತಹ ಉತ್ಕರ್ಷಣ (Antioxidants) ನಿರೋಧಕಗಳು ತಾವರೆಯ ಬೀಜದಲ್ಲಿ ಇರುತ್ತವೆ.

ಮಖಾನ ಸೇವನೆಯಿಂದ ಮಧುಮೇಹದ ಅಪಾಯ ಕಡಿಮೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟು, ಹೃದಯ ಕಾಯಿಲೆಗಳಿಂದ ರಕ್ಷಿಸುತ್ತದೆ. ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ, ತೂಕ ಇಳಿಸಿಕೊಳ್ಳಲು ಸಹಾಯಕವಾಗಿದೆ. ಚರ್ಮದ ಆರೋಗ್ಯ ಹಾಗೂ ಹೊಳಪು ಹೆಚ್ಚಾಗುತ್ತದೆ.

ದೇಹಕ್ಕೆ ಬೇಕಿರುವ ಅತ್ಯವಶ್ಯವಾದ ಪ್ರೋಟೀನ್‌ಗಳು ಮಖಾನಾದಲ್ಲಿ ಸಮೃದ್ಧವಾಗಿವೆ. ಇದರಲ್ಲಿನ ಪ್ರೋಟೀನ್‌ ಸ್ನಾಯು ನಿರ್ವಹಣೆ ಸಹಕಾರಿಯಾಗಿದೆ. ವರ್ಕೌಟ್‌ನಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗುವವರಿಗೆ ಬಹಳಷ್ಟು ಎನರ್ಜಿಯನ್ನು ಇದು ನೀಡುತ್ತದೆ.

ಮಖಾನಾದಲ್ಲಿ ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಮತ್ತು ಜೀವಕೋಶದ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಖಾನಾವು ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಹೊಂದಿದ್ದು, ಮೂಳೆ, ಹಲ್ಲುಗಳ ಆರೋಗ್ಯಕ್ಕೆ ಸಹಕಾರಿಯಾಗಿದೆ. ನಿಮ್ಮ ಆಹಾರದಲ್ಲಿ ಮಖಾನಾವನ್ನು ಸೇರಿಸುವುದರಿಂದ ಮೂಳೆಯ ಆರೋಗ್ಯ ಸುಧಾರಿಸುತ್ತದೆ.

ಮಖಾನಾದಲ್ಲಿ ನೈಸರ್ಗಿಕವಾಗಿ ಸೋಡಿಯಂ ಕಡಿಮೆ ಮತ್ತು ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಇದು ರಕ್ತದೊತ್ತಡದ ಮಟ್ಟವನ್ನು ಸಮತೋಲನಗೊಳಿಸಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.