ಬಿಜೆಪಿ ರಥಯಾತ್ರೆ ತಡೆಯುವವರ ತಲೆಗಳು, ಚಕ್ರಕ್ಕೆ ಸಿಲುಕಿ ಪುಡಿಯಾಗುತ್ತೆ: ಬಿಜೆಪಿ ನಾಯಕಿ

ಕೋಲ್ಕತಾ: ರಾಜ್ಯದಲ್ಲಿ ನಡೆಯುವ ಬಿಜೆಪಿ ರಥಯಾತ್ರೆಗೆ ಅಡ್ಡಿಪಡಿಸುವವರ ತಲೆಗಳು ಚಕ್ರಕ್ಕೆ ಸಿಲುಕಿ ಪುಡಿಯಾಗುತ್ತದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮಹಿಳಾ ಘಟಕದ ಮುಖ್ಯಸ್ಥೆ ಲಾಕೆಟ್ ಚಟರ್ಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಿನಿಮಾದಿಂದ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ಲಾಕೆಟ್ ಚಟರ್ಜಿ ಶನಿವಾರ ಮಲ್ಡಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಬಿಜೆಪಿ ರಥಯಾತ್ರೆ ಮಾಡುತ್ತಿದೆ. ಅಲ್ಲದೇ ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ. ಈ ರಥಯಾತ್ರೆಯನ್ನು ಯಾರೇ ತಡೆಯಲು ಮುಂದಾದರೆ, ಅವರ ತಲೆಗಳೇ ಚಕ್ರಕ್ಕೆ ಸಿಲುಕಿ ಪುಡಿಯಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯ ಅಂಗವಾಗಿ ರಾಜ್ಯದಲ್ಲಿ ಡಿಸೆಂಬರ್ 5, 6 ಮತ್ತು 7 ರಂದು 42 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ರಥಯಾತ್ರೆ ಸಂಚರಿಸಲಿದೆ. ಈ ಯಾತ್ರೆಯನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಘಾಟಿಸಲಿದ್ದಾರೆ. ಅಲ್ಲದೇ ರಥಯಾತ್ರೆಯ ಸಮಾರೋಪ ಸಮಾರಂಭವನ್ನು ಕೋಲ್ಕತಾದಲ್ಲಿ ನಡೆಸಲು ತೀರ್ಮಾನಿಸಿದ್ದೇವೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಲಾಕೆಟ್ ಚಟರ್ಜಿ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ಸಿನ ಕಾರ್ಯದರ್ಶಿ ಪಾರ್ಥ ಚಟರ್ಜಿ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ರಾಜ್ಯದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಬಂಗಾಳದಲ್ಲಿ ಕೋಮುವಾದವನ್ನು ಬಿತ್ತುವುದೇ ಬಿಜೆಪಿ ನಾಯಕರ ಪ್ರಮುಖ ಉದ್ದೇಶ. ಹೀಗಾಗಿಯೇ ಅವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಬಿಜೆಪಿಯ ಒಡೆದು ಆಳುವ ನೀತಿಯನ್ನು, ಪಶ್ಚಿಮ ಬಂಗಾಳ ಜನ ಚುನಾವಣೆಯಲ್ಲಿ ಅವರನ್ನು ಸೋಲಿಸುವ ಮೂಲಕ ಉತ್ತರಿಸುತ್ತಾರೆಂದು ಕಿಡಿಕಾರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *