ಮುಂದಿನ ವರ್ಷದ ಚುನಾವಣೆಯಲ್ಲಿ ಕೆನಡಾ ಪ್ರಧಾನಿ ಟ್ರುಡೋಗೆ ಸೋಲು : ಮಸ್ಕ್‌ ಭವಿಷ್ಯ

ವಾಷಿಂಗ್ಟನ್‌: ಮುಂದಿನ ವರ್ಷ ನಡೆಯಲಿರುವ ಕೆನಡಾ ಚುನಾವಣೆಯಲ್ಲಿ (Canada Election) ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಸೋಲುತ್ತಾರೆ ಎಂದು ಟೆಸ್ಲಾ ಸಂಸ್ಥಾಪಕ ಎಲಾನ್‌ ಮಸ್ಕ್‌ (Elon Musk) ಭವಿಷ್ಯ ನುಡಿದಿದ್ದಾರೆ.

ಎಕ್ಸ್‌ನಲ್ಲಿ ಒಬ್ಬರು ಜರ್ಮನ್‌ನಲ್ಲಿರುವ ಸಮಾಜವಾದಿ ಸರ್ಕಾರವು ಕುಸಿದಿದೆ ಮತ್ತು ಈಗ ಕ್ಷಿಪ್ರ ಚುನಾವಣೆಯ ಕುರಿತು ಮಾತುಕತೆಗಳು ನಡೆಯುತ್ತಿವೆ ಎಂದು ಪೋಸ್ಟ್‌ ಮಾಡಿದ್ದರು.

ಈ ಪೋಸ್ಟ್‌ ಅನ್ನು ಮಸ್ಕ್‌ ಅವರಿಗೆ ಟ್ಯಾಗ್‌ ಮಾಡಿದ ಕೆನಡಾದ ಬಳಕೆದಾರ, ಟ್ರುಡೋವನ್ನು ತೊಡೆದುಹಾಕಲು ನಮಗೆ ಕೆನಡಾದಲ್ಲಿ ನಿಮ್ಮ ಸಹಾಯದ ಅಗತ್ಯವಿದೆ ಎಂದು ಬರೆದಿದ್ದರು. ಇದಕ್ಕೆ ಮಸ್ಕ್‌ ಮುಂದಿನ ಚುನಾವಣೆಯಲ್ಲಿ ಅವರು ಹೋಗುತ್ತಾರೆ ಎಂದು ಕಮೆಂಟ್‌ ಮಾಡಿದ್ದಾರೆ.

ಮುಂದಿನ ವರ್ಷದ ಅಕ್ಟೋಬರ್‌ನಲ್ಲಿ ಕೆನಡಾದಲ್ಲಿ ಚುನಾವಣೆ ನಡೆಯಲಿದೆ. 2015 ರಿಂದ ಜಸ್ಟಿನ್‌ ಟ್ರುಡೋ ಪ್ರಧಾನಿಯಾಗಿ ಅಧಿಕಾರದಲ್ಲಿದ್ದಾರೆ. ಇದನ್ನೂ ಓದಿ: ಶ್ವೇತ ಭವನದಿಂದ ಅವಮಾನವಾಗಿದ್ದಕ್ಕೆ ಕೊನೆಗೂ ಸೇಡು ತೀರಿಸಿಕೊಂಡ ಮಸ್ಕ್‌!

ಖಲಿಸ್ತಾನ (Khalistan) ಉಗ್ರ ಸಂಘಟನೆಯ ವಿಚಾರ ಹಿಡಿದುಕೊಂಡು ಭಾರತದೊಂದಿಗೆ ಚೇಷ್ಟೆ ಮಾಡುತ್ತಿರುವ ಜಸ್ಟಿನ್‌ ಟ್ರುಡೋ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಹಿಂದೆ ವರದಿಯಾಗಿತ್ತು. ಟ್ರುಡೋ ಪ್ರತಿನಿಧಿಸುತ್ತಿರುವ ಲಿಬರಲ್ ಪಕ್ಷದ ಸಂಸದರೇ ಈಗ ಪ್ರಧಾನಿ ವಿರುದ್ಧ ತಿರುಗಿ ಬಿದ್ದಿದ್ದು ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.

ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಕಳಪೆ ಸಾಧನೆಗೆ ಟ್ರುಡೋ ಅವರ ನಾಯಕತ್ವವೇ ಕಾರಣ ಎಂದು ಸದಸ್ಯರು ಬಹಿರಂಗವಾಗಿಯೇ ಹೇಳಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಕೆನಾಡದ ಮಾಧ್ಯಮಗಳು ವರದಿ ಮಾಡಿದ್ದವು.  ಇದನ್ನೂ ಓದಿ: ಜೈಶಂಕರ್‌ ಸುದ್ದಿಗೋಷ್ಠಿ ಪ್ರಸಾರ – ಕೆನಡಾದಲ್ಲಿ ಆಸ್ಟ್ರೇಲಿಯಾ ಟುಡೇ ಬ್ಯಾನ್‌

ಖಲಿಸ್ತಾನ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಆದರೆ ಅ.16 ರಂದು ನಾವು ಯಾವುದೇ ಪುರಾವೆಯನ್ನು ಭಾರತಕ್ಕೆ ನೀಡಿಲ್ಲ ಎಂದು ಕೆ ಜಸ್ಟಿನ್‌ ಟ್ರುಡೋ ಅಧಿಕೃತವಾಗಿ ಒಪ್ಪಿಕೊಳ್ಳುವ ಮೂಲಕ ಸೆಲ್ಫ್‌ ಗೋಲ್‌ ಹೊಡೆದಿದ್ದರು. ಇದರಿಂದಾಗಿ ಕೆನಡಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸುವಂತಾಗಿತ್ತು. ಖಲಿಸ್ತಾನಿ ಪರ ಟ್ರುಡೋ ಬ್ಯಾಟಿಂಗ್‌ ಮಾಡುತ್ತಿರುವುದಕ್ಕೆ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಿತ್ತು.