ಏರ್ ಶೋ ಉಳಿಸಿಕೊಳ್ಳಲು ಅಖಾಡಕ್ಕೆ ಇಳಿದ ಎಚ್‍ಡಿಕೆ-ಮೋದಿಗೆ ಪತ್ರ

ಬೆಂಗಳೂರು: ಬೆಂಗಳೂರಿನಿಂದ ಲಖ್ನೋಗೆ ಏರ್ ಶೋ ಸ್ಥಳಾಂತರ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಧ್ಯೆ ಸಂಘರ್ಷ ಏರ್ಪಟ್ಟಿದ್ದು, ಬೆಂಗಳೂರಿಗೆ ಆದರ್ಶಪ್ರಾಯವಾಗಿರೋ ಏರ್ ಶೋ ಉಳಿಸಲು ಇದೀಗ ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಖಾಡಕ್ಕೆ ಇಳಿಸಿದ್ದಾರೆ.

ಕಳೆದ 12 ವರ್ಷಗಳಿಂದ ನಡೆಸುತ್ತಿರುವ ಏರ್ ಶೋವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು. ನೀವೇ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಬೆಂಗಳೂರಿನಲ್ಲಿಯೇ ಏರ್ ಶೋ ನಡೆಸಲು ಅನುವು ಮಾಡಿಕೊಡಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.

ಕುಮಾರಸ್ವಾಮಿ ಪತ್ರದಲ್ಲಿ ಏನಿದೆ?
ಬೆಂಗಳೂರಿನಲ್ಲಿ ಏರ್ ಇಂಡಿಯಾ ಶೋ ಆಯೋಜನೆ ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ನಡೆದಿರುವ ಏರ್ ಶೋ ಜಗತ್ತಿನ ಬಹುದೊಡ್ಡ ಉದ್ಯಮಿಗಳನ್ನು, ಕೈಗಾರಿಕೋದ್ಯಮಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಕಂಪನಿಗಳು ಸಹ ಬೆಂಗಳೂರಿನಲ್ಲಿ ಏರ್ ಶೋ ಆಯೋಜನೆಗೆ ಇಷ್ಟ ಪಡುತ್ತವೆ. ಕಳೆದ 11 ವರ್ಷಗಳಿಂದ ಯಶಸ್ವಿಯಾಗಿ ಏರ್ ಶೋ ನಡೆಸಿಕೊಂಡು ಬರಲಾಗಿದೆ. 51 ದೇಶಗಳ 500ಕ್ಕೂ ಹೆಚ್ಚು ರಾಷ್ಟ್ರೀಯ, ಅಂತರಾಷ್ಟ್ರೀಯ ಕಂಪನಿಗಳು ಪಾಲ್ಗೊಳ್ಳಲಿವೆ.

ಬೆಂಗಳೂರು ರಕ್ಷಣಾ ಮತ್ತು ವಾಯು ಸೇನೆಯ ಕೇಂದ್ರವಾಗಿದೆ. ರಾಜ್ಯ ಸರ್ಕಾರ ಕೂಡ ಕೆಂದ್ರ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ಕೊಟ್ಟಿದೆ. ಮೂಲಸೌಕರ್ಯ, ರಸ್ತೆ, ಸೇರಿದಂತೆ ಎಲ್ಲ ಸೌಲಭ್ಯವನ್ನು ಒದಗಿಸುವ ಮೂಲಕ ಯಶಸ್ವಿಗೊಳಿಸಿದ್ದೇವೆ. ಹೀಗಾಗಿ ಬೆಂಗಳೂರು ಏರ್ ಶೋ ಆಯೋಜನೆಗೆ ಸೂಕ್ತವಾಗಿದೆ.

ಕಳೆದ ಬಾರಿ ಸಹ ಏರ್ ಶೋ ಯಶಸ್ವಿಯಾಗಿದೆ. ಬೆಂಗಳೂರಿನ ಹವಾಮಾನವೂ ಕೂಡ ಏರ್ ಶೋ ಪ್ರದರ್ಶನಕ್ಕೆ ಸೂಕ್ತವಾಗಿದೆ. ಮುಖ್ಯಮಂತ್ರಿಯಾಗಿ ಉತ್ತಮ ರೀತಿಯಲ್ಲಿ ಆಯೋಜಿಸಬೇಕೆಂಬ ಬಯಕೆಯಿದ್ದು, ಎಲ್ಲ ರೀತಿಯ ಸಹಕಾರ ನಿಡುತ್ತೇನೆ. ಈ ಹಿನ್ನೆಲೆಯಲ್ಲಿ ಏರ್ ಶೋ ಸ್ಥಳಾಂತರಿಸದೆ ನಿಮ್ಮ ಮಧ್ಯಸ್ಥಿಕೆಯಲ್ಲಿ ಬೆಂಗಳೂರಿನಲ್ಲಿಯೇ ಆಯೋಜಿಸುವಂತೆ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ಬರೆದು ಪ್ರಧಾನಿ ನರೇಂದ್ರ ಮೋದಿಗೆ ಕಳುಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *