14 ತಿಂಗಳ ನೋವನ್ನು ಕುಮಾರಣ್ಣ ತಡೆದಿದ್ದಾರೆ- ಎಚ್.ಡಿ.ರೇವಣ್ಣ

ಮಂಡ್ಯ: 14 ತಿಂಗಳುಗಳ ನೋವನ್ನು ಎಚ್.ಡಿ.ಕುಮಾರಸ್ವಾಮಿಯಾಗಿದ್ದಕ್ಕೆ ತಡೆದಿದ್ದಾರೆ. ಬೇರೆ ಯಾರು ಕೂಡ ಈ ಪ್ರಮಾಣದ ನೋವನ್ನು ತಡೆಯುತ್ತಿರಿಲ್ಲ ಎಂದು ಹೇಳುವ ಮೂಲಕ ಅನರ್ಹ ಶಾಸಕರು ಹಾಗೂ ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.

ಜಿಲ್ಲೆಯ ಕೆ.ಆರ್.ಪೇಟೆಯ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಣ್ಣ ರೈತರ ಸಾಲವನ್ನು ಮನ್ನಾ ಮಾಡಿದರು. ಆಗ ಸಹಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೂ ಸಹ ಒಂದು ರೂಪಾಯಿ ಕೊಡಲಿಲ್ಲ. ತುಮಕೂರು ಜಿಲ್ಲೆಯ ತೆಂಗಿನಮರಗಳು ಹಾನಿಯಾಗಿದ್ದವು. ಇದಕ್ಕೆ ಬಿಜೆಪಿಯವರು ಒಂದು ರೂಪಾಯಿ ಸಹ ಕೊಡಲಿಲ್ಲ. ಕುಮಾರಣ್ಣ 200 ಕೋಟಿ ರೂಪಾಯಿ ಕೊಟ್ಟಿದ್ದರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಮಾರವಾಡಿಗಳಿಗೆ ಚಿನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುತ್ತಿದ್ದರು. ಇದರಿಂದಲೇ ಮಾರವಾಡಿಗಳು ಹೆಚ್ಚು ಮನೆಗಳನ್ನು ಕಟ್ಟಿದ್ದಾರೆ. ಆದರೆ, ಕುಮಾರಣ್ಣ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರಿಂದ ಇಂದು ಜನ ಉಸಿರು ಬಿಡುತ್ತಿದ್ದಾರೆ. ಇಲ್ಲವಾಗಿದ್ದರೆ ಈ ಸಾಲವೂ ಸಹ ಅವರಿಗೆ ಹೊರೆಯಾಗುತ್ತಿತ್ತು ಎಂದು ಕುಮಾರಸ್ವಾಮಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕುಮಾರಣ್ಣ ಒಳ್ಳೆಯವರನ್ನೂ ನಂಬುತ್ತಾರೆ, ಕೆಟ್ಟವರನ್ನು ನಂಬುತ್ತಾರೆ. ನಾನು ದೊಡ್ಡವರ ಮಾತು ಕೇಳು ಎಂದು ಹೇಳುತ್ತೇನೆ, ಆದರೆ ಕೇಳಲ್ಲ. ಎಲ್ಲರನ್ನೂ ನಂಬಿ ಪಕ್ಷಕ್ಕೆ ಕರೆ ತರುತ್ತಾನೆ. ಅವರು ಚಂಗಲು ಬಿದ್ದಿರುತ್ತಾರೆ. ಮೇವು ಸಿಕ್ಕಿದ ಕಡೆಗೆ ಹೋಗುತ್ತಾರೆ. ಹೊಟೇಲ್‍ನಲ್ಲಿ ಇದ್ದವರನ್ನು ಕುಮಾರಣ್ಣ ಪಕ್ಷಕ್ಕೆ ಕರೆ ತಂದರು. ಆದರೆ, ಅವು ಚಂಗಲುಗಳು, ಮೇವು ಎಲ್ಲಿ ಸಿಗುತ್ತದೆ ಎಂದು ನೋಡುತ್ತಿರುತ್ತವೆ. ಮೇವು ಸಿಕ್ಕ ಕಡೆ ಹಾರುತ್ತಿರುತ್ತಾರೆ ಎಂದು ಅನರ್ಹ ಶಾಸಕ ನಾರಾಯಣಗೌಡ ವಿರುದ್ಧ ಪರೋಕ್ಷವಾಗಿ ವಗ್ದಾಳಿ ನಡೆಸಿದರು.

ಕೆಲಸ ಮಾಡುವ ಎತ್ತಿಗೆ ಹುಲ್ಲು ಹಾಕು ಎಂದು ನಾನು ಹೇಳುತ್ತೇನೆ. ನನ್ನ ಮಾತನ್ನು ಕೇಳುವುದಿಲ್ಲ, ಈಗ ನೋಡಿ ಏನಾಗಿದೆ ಎಂದು. ಅದಕ್ಕೆ ಇಲ್ಲಿಗೆ ಕುಮಾರಣ್ಣ ಬಂದಿಲ್ಲ. ಮನೆ ಹತ್ತಿರ ಹೋದರೆ ಟೀ ಕೊಡೋದಿಲ್ಲ ಎನ್ನುತ್ತಾರೆ, ಯಾರ ಮನೆಯಲ್ಲಿ ಟೀ ಕೊಡುವುದಿಲ್ಲ. ಇವರು ಟೀ ಕುಡಿಯೋರಲ್ಲ, ಚಂಗಲುಗಳು ಇವರು ಎಂದು ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *