ಎಚ್‍ಡಿಕೆ ಪ್ರಮಾಣವಚನದ ಟೈಮ್ ಮತ್ತೆ ಬದಲು- ಸಮಾರಂಭಕ್ಕೆ ಮಳೆ ಅಡ್ಡಿ ಸಾಧ್ಯತೆ

ಬೆಂಗಳೂರು: ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಗದ್ದುಗೆ ಏರಲು ಹೊರಟ ಎಚ್.ಡಿ ಕುಮಾರಸ್ವಾಮಿ ಪ್ರಮಾಣ ವಚನಕ್ಕೆ ಒಂದಲ್ಲಾ ಒಂದು ವಿಘ್ನ ಎದುರಾಗ್ತಾನೇ ಇದೆ.

ಈಗಾಗಲೇ ಎರಡ್ಮೂರು ಬಾರಿ ಪ್ರಮಾಣ ವಚನ ಸ್ವೀಕರಿಸುವ ಸ್ಥಳ ಬದಲಿಸಿದ ನಂತರ ಇದೀಗ ಸಮಯವನ್ನೂ ಬದಲಿಸಲಾಗಿದೆ. ಬುಧವಾರ ಮಧ್ಯಾಹ್ನ 12.20ಕ್ಕೆ ಬದಲಾಗಿ ಸಂಜೆ 4 ಗಂಟೆಯ ನಂತರ ಎಚ್.ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬುಧವಾರ ಬೆಳಗ್ಗೆ 9 ಗಂಟೆಯಿಂದ 10 ಗಂಟೆಗೆ ಸಮಯ ಚೆನ್ನಾಗಿದ್ರೂ ಸಂಜೆಯ ವೇಳೆ ನವಮಿ ಪೂರ್ವ ಪಲ್ಗುಣಿ ಅಮೃತ ಸಿದ್ಧಿ ಯೋಗವಿದೆ. ಈ ಸಮಯದಲ್ಲಿ ಅಸ್ಥಿರತೆ, ಚಂಚಲತೆ ಇರಲ್ಲ. ಹೀಗಾಗಿ ಮೈತ್ರಿ ಸರ್ಕಾರವೂ ಚಂಚಲವಾಗದೆ, ಸ್ಥಿರವಾಗಿರಲಿ ಎಂದು ಎಚ್‍ಡಿಕೆ ಈ ಸಮಯದಲ್ಲಿ ಪ್ರಮಾಣ ವಚನ ಸ್ವೀಕರಿಸ್ತಿದ್ದಾರೆ ಅನ್ನೋದು ಹಿರಿಯ ಜ್ಯೋತಿಷಿಗಳ ಅಭಿಪ್ರಾಯ.

ಇದರ ಜೊತೆಗೆ ಪ್ರಮಾಣ ವಚನಕ್ಕೆ ವರುಣ ಅಡ್ಡಿಪಡಿಸಲಿದ್ದಾನೆ. ಹವಮಾನ ಇಲಾಖೆಯ ಮಾಹಿತಿ ಪ್ರಕಾರ ಬುಧವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮೇ 30ರಂದು ರಾಜ್ಯಕ್ಕೆ ಮುಂಗಾರು ಎಂಟ್ರಿ ಕೊಡಲಿದ್ದು ಮುಂಗಾರು ಪೂರ್ವ ಮಳೆ ಬುಧವಾರ ಗುರುವಾರ ಅಬ್ಬರಿಸಲಿದೆ ಅಂತಾ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಎಚ್ಚರಿಕೆ ರವಾನಿಸಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿರುವ ಎಚ್‍ಡಿ ಕುಮಾರಸ್ವಾಮಿ ಪ್ರಮಾಣವಚನ ಸಮಾರಂಭಕ್ಕೆ ಗಣ್ಯಾತಿಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ಪಕ್ಷಗಳ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಎಸ್‍ಪಿ ಅಧಿನಾಯಕಿ ಮಾಯಾವತಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಉತ್ತಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್, ಆರ್‍ಜೆಡಿ ನಾಯಕ ತೇಜಸ್ವಿ ಯಾದವ್, ಆಂಧ್ರಪ್ರದೇಶ ಸಿಎಂ ಚಂದ್ರಬಾಬುನಾಯ್ಡು, ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಹಾಗೂ ಇತ್ತೀಚೆಗಷ್ಟೇ ರಾಜಕೀಯಕ್ಕೆ ಕಾಲಿಟ್ಟ ಕಮಲ್ ಹಾಸನ್ ಸೇರಿದಂತೆ ಹಲವರನ್ನು ಆಹ್ವಾನಿಸಲಾಗಿದೆ.

Comments

Leave a Reply

Your email address will not be published. Required fields are marked *