ಎಚ್‍ಡಿಕೆ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುವ ಬಗ್ಗೆ ಚರ್ಚೆ ನಡೆದಿಲ್ಲ: ಸಿದ್ದರಾಮಯ್ಯ

ನವದೆಹಲಿ: ಹೆಚ್ ಡಿ ಕುಮಾರಸ್ವಾಮಿಯವರು ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುವ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸಚಿವ ಸಂಪುಟ ರಚನೆ ಕುರಿತಾದ ರಾಹುಲ್ ಗಾಂಧಿ ಜೊತೆಗಿನ ಸಭೆ ರದ್ದಾಗಿದೆ. ರಾಹುಲ್ ಗಾಂಧಿಯವರು ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ. ಹಾಗಾಗಿ ಒಂದು ವಾರದ ಮಟ್ಟಿಗೆ ಸಭೆ ಮುಂದೂಡಿಕೆಯಾಗಿದೆ. ಮುಂದಿನವಾರ ಮತ್ತೆ ರಾಹುಲ್ ಗಾಂಧಿ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ಸಚಿವ ಸ್ಥಾನ ಹಂಚಿಕೆ ಬಗ್ಗೆ ಯಾವುದೇ ಗೊಂದಲ ಇಲ್ಲ. ಖಾತೆ ಹಂಚಿಕೆ ಬಗ್ಗೆ ಚರ್ಚೆಯಾಗಬೇಕಿದೆ. ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ಚರ್ಚಿಸುತ್ತಾರೆ. ಅಗತ್ಯ ಬಿದ್ದರೆ ನಾನು ಕೂಡ ಕುಮಾರಸ್ವಾಮಿ ಜೊತೆ ಚರ್ಚಿಸುತ್ತೇನೆ. ಹೊಸಬರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಬಗ್ಗೆ ಒತ್ತಡ ಇದೆ. ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಮೇ 25 ರಂದು ವಿಶ್ವಾಸಮತ ಸಾಬೀತು ಪಡಿಸಿದ ನಂತರ ದೆಹಲಿಗೆ ಬರುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೂಚಿಸಿದ್ದರು.

Comments

Leave a Reply

Your email address will not be published. Required fields are marked *