ಕಾಂಗ್ರೆಸ್‍ಗೂ ಮೊದಲೇ ಡಿಕೆಶಿ ಜಾಮೀನು ಸಿಕ್ಕಿದ್ದಕ್ಕೆ ಎಚ್‍ಡಿಕೆ ಟ್ವೀಟ್- ಮತ್ತೆ ಒಂದಾದರಾ ‘ಜೋಡೆತ್ತು’?

ಬೆಂಗಳೂರು: ಅಕ್ರಮ ಹಣ ವರ್ಗಾವಣೆಯ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದಕ್ಕೆ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

ವಿಶೇಷ ಎಂದರೆ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡುವ ಮುನ್ನವೇ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದರು. ಡಿಕೆ ಶಿವಕುಮಾರ್ ಅವರಿಗೆ ದೆಹಲಿಯ ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವುದು ಸಂತೋಷದ ವಿಚಾರ. ಸೋಮವಾರ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಅವರಿಗೆ ಧೈರ್ಯ ತುಂಬಿ ಜಾಮೀನು ಸಿಗುವ ಆಶಯ ವ್ಯಕ್ತಪಡಿಸಿದ್ದೆ ಎಂದು ಟ್ವೀಟ್‍ನಲ್ಲಿ ಎಚ್‍ಡಿಕೆ ಬರೆದುಕೊಂಡಿದ್ದಾರೆ.

ಇತ್ತ ಡಿಕೆಶಿಗೆ ಜಾಮೀನು ಸಿಕ್ಕಿರುವ ವಿಚಾರವನ್ನು ಸ್ವಾಗತಿಸಿರುವ ಮಾಜಿ ಪ್ರಧಾನಿ ದೇವೇಗೌಡ ಅವರು, ದೆಹಲಿಯ ಹೈಕೋರ್ಟ್ ಡಿಕೆ ಶಿವಕುಮಾರ್ ಅವರಿಗೆ ನೀಡಿರುವ ಜಾಮೀನು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನಸಾಮಾನ್ಯರ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿದ್ದು, ನ್ಯಾಯಾಲಯದ ತೀರ್ಮಾನವನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.

ಎಚ್‍ಡಿಕೆ ಟ್ವೀಟ್ ಬಳಿಕ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಅವರು, ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿರುವುದು ಸಂತೋಷ ಉಂಟು ಮಾಡಿದೆ. ದ್ವೇಷ ರಾಜಕಾರಣದ ಉದ್ದೇಶದಿಂದ ಪ್ರಕಣರವು ತನಿಖಾ ಹಂತದಲ್ಲಿರುವಾಗಲೇ ಅವರನ್ನು ಬಂಧಿಸುವ ಮೂಲಕ ಕಾನೂನು ಉಲ್ಲಂಘಟನೆ ಮಾಡಲಾಗಿತ್ತು. ಅವರಿಗೆ ಜಾಮೀನು ದೊರೆತಿರುವುದು ನ್ಯಾಯಕ್ಕೆ ದೊರೆತ ಜಯ. ಪ್ರಕರಣದಲ್ಲಿ ಅವರಿಗೆ ನ್ಯಾಯ ಸಿಗಲಿದೆ ಎಂದು ಹೇಳಿದ್ದಾರೆ. ಇಬ್ಬರ ಟ್ವೀಟ್‍ಗಳನ್ನು ಕರ್ನಾಟಕ ಕಾಂಗ್ರೆಸ್ ರಿಟ್ವೀಟ್ ಮಾಡಿದೆ.

Comments

Leave a Reply

Your email address will not be published. Required fields are marked *