ಕೇವಲ ಹೇಳಿಕೆಗಳಿಗೆ ಸೀಮಿತವಾಗ್ಬೇಡಿ- ಶ್ರೀರಾಮುಲು ವಿರುದ್ಧ ಹೆಚ್‍ಡಿಕೆ ವಾಗ್ದಾಳಿ

ರಾಮನಗರ: ಕೊರೊನಾ ತಡೆಗಾಗಿ ದೇಶಾದ್ಯಂತ ವಿಧಿಸಿರುವ ಲಾಕ್‍ಡೌನ್‍ನ 14ಕ್ಕೆ ನಿಲ್ಲಿಸ್ತಾರೋ ಇಲ್ವೋ ನನಗೆ ಗೊತ್ತಿಲ್ಲ. ಏರುತ್ತಿರುವ ಸೋಂಕಿತರ ಸಂಖ್ಯೆ ಹಿನ್ನೆಲೆಯಲ್ಲಿ ಮತ್ತೆ ಲಾಕ್ ಡೌನ್ ಅನ್ನು ವಿಸ್ತರಣೆ ಮಾಡ್ತಾರೋ ಗೊತ್ತಿಲ್ಲ. ಈ ವಿಚಾರವಾಗಿ ಸರ್ಕಾರದ ಸ್ಪಷ್ಟತೆ ಬಗ್ಗೆ ಗೊತ್ತಿಲ್ಲ. ಸರ್ಕಾರ ಏನ್ ಕ್ರಮ ತೆಗೆದುಕೊಳ್ಳುತ್ತೆ ಅನ್ನೋದನ್ನ ಗಮನಿಸ್ತಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ಕೊರೊನಾ ತಡೆಗಾಗಿ ಜೆಡಿಎಸ್ ಪಕ್ಷದಿಂದ ನಿರ್ಮಿಸಿರುವ ಐದು ದ್ರಾವಣ ಸಿಂಪಡಣೆ ಟನಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ರು. ಇದೇ ವೇಳೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ 16 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಸ್ತಾರೆ. ಉಳಿದ ಜಿಲ್ಲೆಗಳಲ್ಲಿ ಸ್ಥಗಿತಗೊಳಿಸ್ತಾರೆ ಅನ್ನೋದನ್ನ ಗಮನಿಸಿದ್ದೇನೆ. ಸರ್ಕಾರ ಏನು ಕ್ರಮ ತೆಗೆದುಕೊಳ್ಳುತ್ತೆ ಅನ್ನೋದನ್ನ ಗಮನಿಸ್ತಿದ್ದೇನೆ. ಈಗ ಟೀಕೆ ಮಾಡುವ ಸಮಯವಲ್ಲ. ಸರ್ಕಾರ ಸರಿಯಾಗಿ ಕೆಲಸ ಮಾಡಲು ಸಲಹೆ ನೀಡುವ ಸಮಯವಾಗಿದೆ. ಯಾವ್ಯಾವ ರೀತಿ ಕ್ರಮ ತೆಗೆದುಕೊಳ್ತಾರೆ ನೋಡೋಣ ಎಂದು ತಿಳಿಸಿದ್ರು.

ಕೊರೊನಾ ತಡೆಗಾಗಿ ವೈದ್ಯಕೀಯ ಇಲಾಖೆಗೆ ಸರಿಯಾದ ರೀತಿಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಸಿಎಂ ಸಭೆ ಅಲ್ಲದೇ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೂ ಸಹ ಫೋನ್ ಮೂಲಕ ಹೇಳ್ತಿದ್ದೇನೆ. ಪಿಪಿಇ ಸೆಟ್, ಕಿಟ್ ಗಳನ್ನ ತಕ್ಷಣ ತರುವಂತಹ ಕೆಲಸಗಳಾಗಬೇಕು. ಮಾಧ್ಯಮಗಳಲ್ಲಿ ತೋರಿಕೆಗೆ ಕೇವಲ ಹೇಳಿಕೆಗೆ ಸೀಮಿತವಾಗಬಾರದು ಎಂದು ಆರೋಗ್ಯ ಸಚಿವ ಶ್ರೀರಾಮುಲುಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಕೊರೊನಾ ಎಫೆಕ್ಟ್ ನಿಂದ ರೈತರು ಬೆಳೆದ ಬೆಳೆಗಳ ಬೆಲೆ ಕಡಿಮೆಯಾಗಿದೆ. ರೈತರಿಂದ ಜಮೀನಿನಲ್ಲಿಯೇ ಖರೀದಿ ಮಾಡುವ ವ್ಯವಸ್ಥೆ ಜಾರಿಗೆ ತರಲು ಹೇಳಿದ್ದೇನೆ. ರಫ್ತು ಮಾಡುವುದು ಈ ಸಂಧರ್ಭದಲ್ಲಿ ಕ್ಲಿಷ್ಟಕರವಾದದ್ದು. ಈಗಾಗಲೇ ರೈತರ ಬೆಳೆ ನಷ್ಟವಾಗಿದ್ದು ನಷ್ಟದ ಮಾಹಿತಿ ಪಡೆದು ಸರ್ಕಾರ ಎಕರೆಗೆ 10 ರಿಂದ 20 ಸಾವಿರ ಪರಿಹಾರ ನೀಡಲಿ ಎಂದು ಆಗ್ರಹಿಸಿದ್ರು.

ಪರಿಹಾರದ ಹಣ ನೀಡಲು ನನ್ನ ಅಭಿಪ್ರಾಯದಲ್ಲಿ ಸರ್ಕಾರಕ್ಕೆ ಹಣದ ಕೊರತೆಯಿಲ್ಲ. ತಾವು ರೈತರ ಸಾಲ ಮನ್ನಾಗೆ ಹಣ ಕ್ರೋಢೀಕರಿಸಿದ್ದೇನೆ. ಆ ರೀತಿ ರೈತ ಉಳಿಯಲು ಸರ್ಕಾರ ನೆರವು ನೀಡಬೇಕು. ಇಂದು ಓರ್ವ ರೈತ ಉತ್ತರ ಕರ್ನಾಟಕದಲ್ಲಿ ಸಾವನ್ನಪ್ಪಿದ್ದು, ಪ್ರತಿದಿನ ಓರ್ವ ರೈತ ಆತ್ಮಹತ್ಯೆಗೆ ಶರಣಾಗುವ ಕಾಲ ಪ್ರಾರಂಭವಾಗಿದೆ ಎಂದು ತಿಳಿಸಿದ್ರು.

Comments

Leave a Reply

Your email address will not be published. Required fields are marked *