ಪ್ರಕೃತಿ ಚಿಕಿತ್ಸೆಯಲ್ಲಿ ಕೂತು ಕತ್ತಿ ಮಸೆದಿದ್ದು ಯಾರು?: ಸಿದ್ದರಾಮಯ್ಯ ವಿರುದ್ಧ ಎಚ್‍ಡಿಕೆ ಗರಂ

ಬೆಂಗಳೂರು: ಉಪ ಚುನಾವಣೆಯಲ್ಲಿ ಕಾಂಗ್ರೆಸ್ 15 ಸೀಟ್ ಗೆದ್ದರೆ ಜೆಡಿಎಸ್ ಜೊತೆ ಸೇರುವುದಿಲ್ಲ. ಮತ್ತೆ ಚುನಾವಣೆಗೆ ಹೋಗುತ್ತೇವೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಫುಲ್ ಗರಂ ಆಗಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಎಚ್.ಡಿ.ಕುಮಾರಸ್ವಾಮಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆದ್ದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಬೇಕು. ನಂತರ ನೇರವಾಗಿ ಚುನಾವಣೆಗೆ ಹೋಗುತ್ತೇವೆ. ಜೆಡಿಎಸ್ ಜೊತೆಗೆ ಸೇರುವುದಿಲ್ಲ. ಅವರ ಜೊತೆ ಸೇರಿ ಅನುಭವಿಸಿದ್ದು ಸಾಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯನವರೇ ಯಾರ ಸಹವಾಸದಿಂದ ಯಾರು ಕೆಟ್ಟರು? ಯಾರು ಯಾರಿಗೆ ಕೇಡು ಬಗೆದರು ಎಂದು ಆತ್ಮವಂಚನೆ ಇಲ್ಲದೇ ಹೇಳುವಿರಾ ಎಂದು ಪ್ರಶ್ನಿಸಿದ್ದಾರೆ.

ಎರಡನೇ ಟ್ವೀಟ್‍ನಲ್ಲಿ, ನಮ್ಮ ಸಹವಾಸ ಮಾಡಿ ಎಂದು ಸಿದ್ದರಾಮಯ್ಯ ಅವರನ್ನು ಬೇಡಿದ್ದು ಯಾರು? ಅವರ ಮನೆ ಬಾಗಿಲಿಗೆ ಹೋಗಿದ್ದು ಯಾರು? ಸಹಕಾರ ಕೊಟ್ಟವರು ಯಾರು? ಪ್ರಕೃತಿ ಚಿಕಿತ್ಸೆಯಲ್ಲಿ ಕೂತು ಕತ್ತಿ ಮಸೆದಿದ್ದು ಯಾರು? ದಿನಕ್ಕೊಬ್ಬರ ಮೂಲಕ ನನ್ನನ್ನು ಟೀಕಿಸಿದ್ದು ಯಾರು ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ, ಲೋಕಸಭೆ ಚುನಾವಣೆಯಲ್ಲಿ ನೀವು ಕೊಟ್ಟ ಸಹಕಾರ ಎಂಥದ್ದು? ಸರ್ಕಾರ ಬೀಳಿಸಿದ ಶಾಸಕರ ಎದೆ ಬಗೆದರೆ ಅಲ್ಲಿ ಕಾಣುತ್ತಿದ್ದವರು ಯಾರು? ಈ ಯಾರು ಎಂಬ ಪ್ರಶ್ನೆಗೆ ನೀವು ಪ್ರಾಮಾಣಿಕವಾಗಿ ಉತ್ತರಿಸುವಿರಾ? ನೀವು ಕೊಟ್ಟ ಸಹಕಾರಕ್ಕೆ, ಬೆಂಬಲಕ್ಕೆ ನಾನು ಋಣಿ. ಈ ಜನ್ಮದಲ್ಲಿ ನಾನು ಮರೆಯಲಾರೆ. ನಿಮ್ಮ ಸಹವಾಸ ನಮಗೂ ಬೇಡ ಸಿದ್ದರಾಮಯ್ಯನವರೇ ಎಂದು ತಿರುಗೇಟು ಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *