ರಾಯಚೂರು: ದರೋಡೆಕೋರರನ್ನು ನೋಡಲು ಚಂಬಲ್ ಕಣಿವೆಗೆ ಹೋಗಬೇಕಿಲ್ಲ, ಬೆಂಗಳೂರಿಗೆ ಬಂದರೆ ದರೋಡೆಕೋರರು ವಿಧಾನಸೌಧದಲ್ಲಿದ್ದಾರೆ. ಅವರನ್ನು ಜಾಗ ಖಾಲಿ ಮಾಡಿಸಬೇಕಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಯಚೂರಿನ ಮಾನ್ವಿಯಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐದು ವರ್ಷ ಅಧಿಕಾರ ಕೊಡಿ ಪಂಚರತ್ನ ಯೋಜನೆ ಜಾರಿ ಮಾಡುತ್ತೇನೆ. ಆಶ್ವಾಸನೆ ಈಡೇರಿಸದೇ ಹೋದರೆ ನನ್ನ ಸರ್ಕಾರವನ್ನು ವಿಸರ್ಜನೆ ಮಾಡುತ್ತೇನೆ. ಬಿಜೆಪಿ ಸರ್ಕಾರ ಸ್ವಾತಂತ್ರ್ಯ ಅಮೃತಮಹೋತ್ಸವದ ಹೆಸರಲ್ಲಿ ಯೋಜನೆ ಘೋಷಿಸಿದೆ ಆದ್ರೆ ಮಹಿಳೆಯರನ್ನು ಕಡೆಗಣಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಮಹಿಳೆಯರು ಪೌಷ್ಟಿಕ ಆಹಾರ ಕೊರತೆ ಎದುರಿಸುತ್ತಿದ್ದಾರೆ. 17 ಲಕ್ಷ ಬಡ ಕುಟುಂಬದಲ್ಲಿ ಜನಿಸಿದ ಮಕ್ಕಳು ಹುಟ್ಟಿದ ಒಂದೆರಡು ದಿನದಲ್ಲಿ ಸತ್ತಿದ್ದಾರೆ. ಸರ್ಕಾರ ಸರಬರಾಜು ಮಾಡುವ ಪೌಷ್ಟಿಕ ಆಹಾರದಲ್ಲೂ ಲೂಟಿ ನಡೆದಿದೆ. ಹೀಗಾಗಿ ಪಂಚರತ್ನ ಕಾರ್ಯಕ್ರಮ ಮೂಲಕ ದೇಶದಲ್ಲಿ ಮಾದರಿ ಯೋಜನೆ ತರಲು ಗುರಿ ಹೊಂದಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ದಾಳಿ – ಶ್ರೀಕೃಷ್ಣನ ಸಂದೇಶದಂತೆ ಕೆಲಸ ಆಗಬೇಕೆಂದ HDK

ದೇವದುರ್ಗದಲ್ಲಿ ಶಾಸಕ ಶಿವನಗೌಡ ನಾಯಕ್ ಹಗಲು ದರೋಡೆ ಮಾಡಿ ಈಗ ಮಾನ್ವಿ ಕಡೆ ಬರುತ್ತಿದ್ದಾರೆ. ಶಿವನಗೌಡ ನಾಯಕ್ ನಮ್ಮಲ್ಲಿಗೆ ಬಂದಾಗ ಹಾಕಲು ಬಟ್ಟೆ ಇರಲಿಲ್ಲ. ಗೆದ್ದ ಮೇಲೆ ನಮಗೆ ಚೂರಿ ಹಾಕಿದರು. ಶಿವನಗೌಡ ನಾಯಕ್ ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಈ ಬಾರಿ ಜನ ಅವರಿಗೆ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಕರ್ತವ್ಯ ಲೋಪ ಆರೋಪ – 1,500 ಪುಟಗಳ ದಾಖಲೆ ಸಲ್ಲಿಸಿದ ಸಾ.ರಾ.ಮಹೇಶ್

Leave a Reply