ಬ್ರಿಟಿಷರಿಗೂ, ಬಿಜೆಪಿಗೂ ಯಾವುದೇ ವ್ಯತ್ಯಾಸವಿಲ್ಲ: ಹೆಚ್‍ಡಿಕೆ

ಬೆಂಗಳೂರು: ಬಿಜೆಪಿ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಮುಂದುವರಿಸಿದ್ದು, ಬ್ರಿಟೀಷರಿಗೂ ಮತ್ತು ಬಿಜೆಪಿಗೆ ಯಾವುದೇ ವ್ಯತ್ಯಾಸ ಇಲ್ಲ ಎನ್ನುವುದಕ್ಕೆ ಇದೇ ಜೀವಂತ ಸಾಕ್ಷಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ಗೃಹ ಸಚಿವ ಅಮಿತ್ ಶಾ ಅವರು ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯಲ್ಲಿ ಮಾತನಾಡಿ, ಇಂಗ್ಲಿಷ್‍ಗೆ ಪರ್ಯಾಯವಾಗಿ ದೇಶದಲ್ಲಿ ಹಿಂದಿ ಬಳಕೆಯಾಗಬೇಕು ಎಂದು ಹೇಳಿದ್ದರು. ಈ ಕುರಿತು ಹೆಚ್‍ಡಿಕೆ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದರು.

ಟ್ವೀಟ್‍ನಲ್ಲಿ ಏನಿದೆ?:

ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡು ಕಳೆದ 75 ವರ್ಷಗಳಿಂದ ಒಂದೇ ತಾಯಿಯ ಮಕ್ಕಳಂತೆ ಇರುವ ರಾಜ್ಯಗಳ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹುಳಿ ಹಿಂಡಿ, ಹಿಂದಿ ಹೇರಿಕೆ ಬಗ್ಗೆ ಹೇಳಿಕೆ ನೀಡುತ್ತಿರುವುದು ಆಘಾತಕಾರಿ.

ಪ್ರತಿಯೊಂದಕ್ಕೂ ಹಿಂದುತ್ವದ ಜಪ ಮಾಡಿ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದು ಸಮಾಜ ಮತ್ತು ಜನರನ್ನು ಒಡೆಯುತ್ತಿರುವ ಬಿಜೆಪಿ, ಈಗ ಭಾಷೆಯನ್ನೂ ಟೂಲ್ ಕಿಟ್ ಮಾಡಿಕೊಂಡು ವಿಭಜನೆಗೆ ಹೊರಟಿರುವುದು ದೇಶಕ್ಕೆ ಗಂಡಾಂತರಕಾರಿ. ಇದನ್ನೂ ಓದಿ: ಅತಿ ಶೀಘ್ರದಲ್ಲೇ ರಮೇಶ್ ಜಾರಕಿಹೊಳಿ ಮಂತ್ರಿ ಆಗ್ತಾರಾ..?

ಬ್ರಿಟಿಷರು ಪ್ರತಿ ಸಂಸ್ಥಾನವನ್ನು ಆಕ್ರಮಿಸಿಕೊಳ್ಳುವ ಮುನ್ನ ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಈಗ ಬಿಜೆಪಿ ಅದೇ ನೀತಿ ಮುಂದುವರಿಸಿದ್ದು, ಬ್ರಿಟಿಷರಿಗೂ ಮತ್ತು ಬಿಜೆಪಿಗೆ ಯಾವುದೇ ವ್ಯತ್ಯಾಸ ಇಲ್ಲ ಎನ್ನುವುದಕ್ಕೆ ಇದೇ ಜೀವಂತ ಸಾಕ್ಷಿ.

ಅಮಿತ್ ಶಾ ಅವರಿಗೆ ಇಂಗ್ಲಿಷ್ ಬರಲ್ವಾ? ಅವರಿಗೆ ಪ್ರಾದೇಶಿಕ ಭಾಷೆಗಳ ಮೇಲೆ ಯಾಕೆ ಈ ಪರಿ ದ್ವೇಷ? ನಮ್ಮ ಭಾಷೆ ನಮಗೆ ಮುಖ್ಯ. ಮಾತೃಭಾಷೆಗೆ ಅಗ್ರಸ್ಥಾನ. ಕರ್ನಾಟಕದಲ್ಲಿ ಕನ್ನಡವೇ ಮೊದಲು. ಹಿಂದಿ ನಮ್ಮ ಭಾಷೆಯಲ್ಲ. ಹಿಂದಿ ಹೇರಿಕೆ ವಿರುದ್ಧ ಅಭಿಯಾನಕ್ಕೆ ನನ್ನ ಪೂರ್ಣ ಬೆಂಬಲ ಇದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: 18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್- ಎಲ್ಲರೂ ತಪ್ಪದೇ ಲಸಿಕೆ ಪಡೆಯಿರಿ: ಸುಧಾಕರ್

Comments

Leave a Reply

Your email address will not be published. Required fields are marked *