ಅವಧಿಗೂ ಮುನ್ನವೇ ರಾಜ್ಯದಲ್ಲಿ ಚುನಾವಣೆ ನಡೆಯುವ ಸಾಧ್ಯತೆ: ಹೆಚ್‍ಡಿಕೆ

ಕಲಬುರಗಿ: ರಾಜ್ಯದಲ್ಲಿ ಅವಧಿಗೂ ಮುನ್ನವೇ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಚುನಾವಣೆಗೆ ಜೆಡಿಎಸ್ ಸಿದ್ಧವಾಗುತ್ತಿದೆ. ಜೊತೆಗೆ ನಾನು ಯಾವತ್ತೂ ಬಿಜೆಪಿಗೆ ಮೃದು ಧೋರಣೆ ತೋರಿಸಿಲ್ಲ. ಹಾಗೆ ಮೃದು ಧೋರಣೆ ಇದ್ದಿದ್ದರೆ, ನಾನು ಈ ರೀತಿ ಮಾತಾಡುತ್ತಿರಲಿಲ್ಲ ಎಂದು ಹೇಳಿದರು.

ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಬೇಕಾದಾಗ ಬಳಸಿಕೊಂಡಿವೆ. ನೀರಾವರಿ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯದ ಜನರಿಗೆ ಮೂರು ನಾಮ ಎಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನರಿಗೆ ಎರಡು ಪಕ್ಷಗಳು ದ್ರೋಹ ಮಾಡುತ್ತಿವೆ ಎಂದು ಕಿಡಿಕಾರಿದರು.

ಸಿಎಂ ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿ ಅನುಭವ ಹೊಂದಿದವರು. ಬಜೆಟ್‍ನಲ್ಲಿ ನೀರಾವರಿ ಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ ರಾಜ್ಯದ ಜನರಿಗೆ ಸಿಎಂ ದ್ರೋಹ ಮಾಡಿದ್ದಾರೆ. ಕೇಂದ್ರ ನೀರಾವರಿ ಸಚಿವರು ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ್ದೇನೆ, ಎರಡು ರಾಜ್ಯ ಒಪ್ಪಿದ್ರೆ ಮಾತುಕತೆ ಮಾಡೋದಾಗಿ ಹೇಳ್ತಾರೆ. ಅದೇ ರೀತಿ ಕಾಂಗ್ರೆಸ್‍ನವರು ನಮ್ಮ ಪಾದಯಾತ್ರೆ ನೋಡಿ ಸಾವಿರ ಕೋಟಿ ನೀಡಿದ್ದಾರೆ ಎಂದು ಹೇಳುತ್ತಾರೆ. ಎರಡು ಪಕ್ಷಕ್ಕೆ ಮೇಕೆದಾಟು ಯೋಜನೆ ಪ್ರಾರಂಭ ಮಾಡುವ ಯೋಗ್ಯತೆ ಇಲ್ಲಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ, ಚುನಾವಣೆ ಮೇಲೆ ಸಕಾರಾತ್ಮಕ ಪರಿಣಾಮ: ಅಮಿತ್ ಶಾ

ನಮ್ಮ ದೇಶದಲ್ಲಿ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಕೈಗೆಟಕುವ ದರದಲ್ಲಿ ಶಿಕ್ಷಣ ಸಿಗುತ್ತಿಲ್ಲ. ಹೀಗಾಗಿ ಉಕ್ರೇನ್ ದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಬೇಕಾದ ಸ್ಥಿತಿ ಬಂದಿದೆ. ಇಲ್ಲಿ ಶಿಕ್ಷಣ ಸಿಕ್ಕರೆ ಅಲ್ಲಿಗೆ ಹೋಗಿ ಪ್ರಾಣ ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಆರಂಭದಲ್ಲಿ ಉಕ್ರೇನ್‌ನಿಂದ ಭಾರತೀಯರನ್ನು ಕರೆತರುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಟಿಕೆಟ್ ಖರೀದಿಸಿ ಮೆಟ್ರೋ ರೈಲಿದಲ್ಲಿ ಪ್ರಯಾಣಿಸಿದ ಮೋದಿ

ಸಿಎಂ ಇಬ್ರಾಹಿಂ ಬಗ್ಗೆ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ಅವರು ಇಷ್ಟು ದಿನ ಬಾಡಿಗೆ ಮನೆಯಲ್ಲಿ ವಾಸವಿದ್ದು, ಈಗ ನಮ್ಮ ಸ್ವಂತ ಮನೆಗೆ ಬರುತ್ತಿದ್ದಾರೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *