ರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣಕ್ಕೆ ಕ್ಷಮೆಯೇ ಇಲ್ಲ: ಎಚ್‍ಡಿಕೆ

ಬೆಂಗಳೂರು: ಹಿಂದೂ ಕಾರ್ಯಕರ್ತ ಹರ್ಷ  ಹತ್ಯೆಯಾಗಿದ್ದಾನೆ. ಈ ಮೂಲಕವಾಗಿ ರಾಷ್ಟ್ರೀಯ ಪಕ್ಷಗಳು ಹಿಂಸಾ ರಾಜಕಾರಣದ ಪೂರ್ಣ ಸಿನಿಮಾ ತೋರಿಸಲು ಹೊರಟಿವೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿ ಸಾಲು, ಸಾಲು ಟ್ವೀಟ್ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: ಶಿವಮೊಗ್ಗದಲ್ಲಿ ನಡೆದ ಯುವಕನ ಕೊಲೆ ಅಮಾನವೀಯ. ಆ ಯುವಕನ ಕುಟುಂಬಕ್ಕೆ ನನ್ನ ಸಾಂತ್ವನಗಳು. ಈ ಕೊಲೆಯ ಹಿಂದೆ ಯಾರೇ ಇದ್ದರೂ ಅವರನ್ನು ತಕ್ಷಣ ಪತ್ತೆಹಚ್ಚಿ ಬಂಧಿಸಬೇಕು ಎನ್ನುವುದು ಸರ್ಕಾರಕ್ಕೆ ನನ್ನ ಒತ್ತಾಯ ಎಂದು ಅವರು ಟ್ವೀಟ್‍ನಲ್ಲಿ ಉಲ್ಲೇಖಿಸಿದ್ದಾರೆ.

ಹತ್ಯೆಗೀಡಾದ ಯುವಕನಿಗೆ ಮೊದಲೇ ಜೀವ ಬೆದರಿಕೆ ಇತ್ತೆಂದೂ, ಪೊಲೀಸರಿಗೆ ದೂರು ಕೊಡಲಾಗಿತ್ತು ಎಂದೂ ಹೇಳುತ್ತಿದ್ದಾರೆ. ಹಾಗಾದರೆ ಆ ಯುವಕನಿಗೆ ರಕ್ಷಣೆ ಯಾಕೆ ಕೊಡಲಿಲ್ಲ? ಇದಕ್ಕೆ ಉತ್ತರ ಬೇಕಿದೆ ಎಂದು ಆಢಳಿತ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಪಕ್ಷಗಳು 2023ರ ಚುನಾವಣೆಗೆ ಸದನದಲ್ಲಿ ಗದ್ದಲ ಎಬ್ಬಿಸುವ ಮೂಲಕ ಟ್ರೈಲರ್ ಬಿಟ್ಟಿದ್ದು, ಸಿನಿಮಾ ಬಾಕಿ ಇದೆ ಎಂದಿದ್ದೆ. ಶಿವಮೊಗ್ಗ ಘಟನೆಯ ಮೂಲಕ ರಾಷ್ಟ್ರೀಯ ಪಕ್ಷಗಳು ಹಿಂಸಾ ರಾಜಕಾರಣದ ಪೂರ್ಣ ಸಿನಿಮಾ ತೋರಿಸಲು ಹೊರಟಿವೆ. ಜನರ ಸೂಕ್ಷ್ಮ ಭಾವನೆಗಳು ಹಾಗೂ ಸಮಾಜದ ಶಾಂತಿಯನ್ನು ಅಪಾಯಕ್ಕೆ ಒಡ್ಡಿ ಬೇಳೆ ಬೇಯಿಸಿಕೊಳ್ಳುತ್ತಿರುವ ರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣಕ್ಕೆ ಕ್ಷಮೆಯೇ ಇಲ್ಲ ಎಂದು ಅವರು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಕಿಡ್ನಿದಾನ ಮಾಡಿದ ತಾಯಿ!

ಈಗ ಒಂದು ಅಮೂಲ್ಯ ಪ್ರಾಣ ಹೋಗಿದೆ. ಅದಕ್ಕೆ ಯಾರು ಹೊಣೆ? ರಾಜಕಾರಣಿಗಳು ಮೂರು ದಿನ ಹೋದ ಪ್ರಾಣದ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸಿ, ಹತ್ತು ಲಕ್ಷ ಪರಿಹಾರ ಕೊಟ್ಟರೆ ಸಾಕೇ?. ಇಂತಹ ಹಿಂಸಾ ಪ್ರವೃತ್ತಿಗೆ ಕೊನೆ ಎಂದು? ಇದನ್ನೂ ಓದಿ: ದೇಶ, ಧರ್ಮಕ್ಕೋಸ್ಕರ ಕೆಲಸ ಮಾಡಿದ ಯುವಕ ಇವತ್ತಿಲ್ಲ: ಕೆ. ಸುಧಾಕರ್


ನಡೆದಿದ್ದೇನು?: ಭಾನುವಾರ ರಾತ್ರಿ ಹರ್ಷ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿದೆ. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿದೆ. ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಆ ಬಳಿಕದಿಂದ ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ಇಮದು ಹರ್ಷ ಮೃತದೇಹ ಮೆರವಣಿಗೆ ವೇಳೆ ಕಲ್ಲು ತೂರಾಟ ಹಾಗೂ ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ಹಿಂಸಾಚಾರಕ್ಕ ತಿರುಗಿತು. ಸದ್ಯ ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

Comments

Leave a Reply

Your email address will not be published. Required fields are marked *