ಎಚ್‍ಡಿಕೆ ಮಾತನ್ನು ನಂಬಿ ಗರ್ಭಿಣಿಯಾಗಿದ್ರೆ ಬೀದಿಗೆ ಬರುತ್ತಿದ್ದರು: ಆಯನೂರು ಮಂಜುನಾಥ್

ಬೆಂಗಳೂರು: ಮಹಿಳೆಯರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಾತು ಕೇಳಿ ಗರ್ಭಿಣಿಯಾಗಿದ್ದರೆ ಬೀದಿಗೆ ಬರುತ್ತಿದ್ದರು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ರವರು ಜೆಡಿಎಸ್ ಪ್ರಣಾಳಿಕೆಗೆ ಟಾಂಗ್ ನೀಡಿದ್ದಾರೆ.

ಇಂದು ಮಧ್ಯಾಹ್ನದ ವೇಳೆ ಬಜೆಟ್ ಬಗ್ಗೆ ನಡೆದ ಚರ್ಚೆಯಲ್ಲಿ ಅಯನೂರು ಮಂಜುನಾಥ್ ಜೆಡಿಎಸ್ ಪ್ರಣಾಳಿಕೆಯ ಬಗ್ಗೆ ಮಾತನಾಡುತ್ತಾ, ಸಿಎಂ ಕುಮಾರಸ್ವಾಮಿಯವರು ತಮ್ಮ ಜೆಡಿಎಸ್ ಪ್ರಣಾಳಿಕೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಪ್ರತಿ ತಿಂಗಳು 6 ಸಾವಿರ ರುಪಾಯಿ ಕೊಡುತ್ತೇನೆಂದು ಭರವಸೆ ನೀಡಿದ್ದರು. ಆದರೆ ತಮ್ಮ ಬಜೆಟ್ ನಲ್ಲಿ ಇದಕ್ಕೆ ಮಾತು ತಪ್ಪಿದ್ದಾರೆ. ಒಂದು ವೇಳೆ ಸಿಎಂ ಅವರ ಮಾತನ್ನು ನಂಬಿ ಮಹಿಳೆಯರು ಗರ್ಭಿಣಿಯಾಗಿದ್ದರೆ ಅವರ ಸ್ಥಿತಿ ಹರೋಹರ ಆಗುತಿತ್ತು ಎಂದು ಹೇಳಿದರು.

ಆಯನೂರು ಬಳಸಿದ ಪದಕ್ಕೆ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಮಹಿಳಾ ಮತ್ತು ಕಲ್ಯಾಣ ಖಾತೆಯ ಸಚಿವೆ ಜಯಮಾಲಾ, ಆಡಳಿತ ಪಕ್ಷದ ಸದಸ್ಯರಾದ ವಿ.ಎಸ್. ಉಗ್ರಪ್ಪ, ಜಯಮ್ಮ ಬಾಲರಾಜು, ವೀಣಾ ಅಚ್ಚಯ್ಯ ಅವರು ಮಂಜುನಾಥ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಯಾರು ಯಾರನ್ನು ಕೇಳಿ ಗರ್ಭಿಣಿಯಾಗುವುದಿಲ್ಲ. ನಿಮ್ಮನ್ನು ಹೆರುವಾಗ ನಿಮ್ಮ ತಾಯಿ ಯಾರನ್ನಾದರೂ ಕೇಳಿ ಗರ್ಭಿಣಿಯಾಗಿದ್ದರೆ ಎಂದು ಪ್ರಶ್ನಿಸಿದರು. ಇದರಿಂದ ಮತ್ತೆ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಗದ್ದಲ, ಕೋಲಾಹಲಕ್ಕೆ ಉಂಟಾಯಿತು.

ಈ ವೇಳೆ ಮಧ್ಯ ಪ್ರವೇಶಿಸಿದ ವಿ.ಎಸ್. ಉಗ್ರಪ್ಪ ಅವರು, ಹೆಣ್ಣು ಮಕ್ಕಳ ಬಗ್ಗೆ ಅಗೌರವದಿಂದ ನಡೆದುಕೊಳ್ಳುವ ಸಂಸ್ಕೃತಿ ಸರಿಯಲ್ಲ, ನಿಮ್ಮಲ್ಲೂ ಹೆಣ್ಮಕ್ಕಳು ಇದ್ದಾರೆ ಹೀಗೆಲ್ಲಾ ಮಾತನಾಡಬೇಡಿ ಎಂದು ಆಯನೂರು ಮಂಜುನಾಥ್ ಅವರಿಗೆ ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *