ಸಾಲಮನ್ನಾ ಲಾಲಿಪಪ್ ಎಂಬ ಪ್ರಧಾನಿ ಹೇಳಿಕೆಗೆ ಎಚ್‍ಡಿಕೆ ತಿರುಗೇಟು

ಬೆಂಗಳೂರು: ಮುಂದಿನ ಬಜೆಟ್ ನಲ್ಲಿ ರೈತರ ಬೆಳೆ ಸಾಲಮನ್ನಾ ಘೋಷಣೆಯ 46 ಸಾವಿರ ಕೋಟಿ ರೂ. ಗಳನ್ನು ಒಂದು ಕಂತಿನಲ್ಲಿ ಮನ್ನಾ ಮಾಡಲಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಲೋಕಸಭೆ ಚುನಾವಣೆ ತಯಾರಿ ಹಿನ್ನೆಲೆ ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಸಾಲಮನ್ನಾ ಲಾಲಿಪಪ್ ಎಂಬ ಪ್ರಧಾನಿ ಮಾತಿಗೆ ತಿರುಗೇಟು ನೀಡಿದರು. ಫೆಬ್ರವರಿ 8 ರಂದು ಬಜೆಟ್ ಮಂಡಿಸಲಿದ್ದು ರೈತರ ಸಂಪೂರ್ಣ ಸಾಲಮನ್ನಾ ಒಂದೇ ಕಂತಿನಲ್ಲಿ ಮನ್ನಾ ಮಾಡುತ್ತೇನೆ ಎಂದು ಘೋಷಿಸಿದರು.

ದೇಶದ ಪ್ರಧಾನಿಗಳಿರುವ ಮೋದಿ ಅವರಿಗೆ ಕ್ಷಣ ಕ್ಷಣದ ಮಾಹಿತಿ ಲಭ್ಯವಾಗುತ್ತದೆ. ಆದರೆ ಪ್ರಧಾನಿ ಸ್ಥಾನದಲ್ಲಿ ಕುಳಿತ ಅವರು ಆ ಸ್ಥಾನಕ್ಕೆ ಗೌರವ ನೀಡಿ ರೈತರ ಸಾಲಮನ್ನಾ ಬಗ್ಗೆ ಮಾತನಾಡಬೇಕು. ಆದರೆ ಸಾಲಮನ್ನಾ ಕುರಿತು ಲಘುವಾಗಿ ಮಾತನಾಡಿದ್ದಾರೆ. ಇದು ಆ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ಲೋಕಸಭೆಯಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನ ಗೆಲ್ಲಿಸುವಂತೆ ಮನವಿ ಮಾಡಿದ ಸಿಎಂ ಕುಮಾರಸ್ವಾಮಿ, ಲೋಕಸಭೆಯಲ್ಲಿ ಜೆಡಿಎಸ್‍ಗೆ 10-12 ಸೀಟು ಗೆಲ್ಲಿಸಿಕೊಟ್ಟರೆ ಮೋದಿ ದೇವೇಗೌಡರ ಮನೆ ಬಾಗಿಲಿಗೆ ಬರುತ್ತಾರೆ. ದೆಹಲಿ ನಾಯಕರು ಕರ್ನಾಟಕದ ಬಾಗಿಲಿಗೆ ಬರುತ್ತಾರೆ. ಹೀಗಾಗಿ ಪಕ್ಷದ ಎಲ್ಲಾ ನಾಯಕರು, ಮುಖಂಡರು ಪಕ್ಷದ ಪರವಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಸಿಎಂ ಹುದ್ದೆ ನನಗೆ ದೇವರು ಕೊಟ್ಟ ಅಧಿಕಾರ ಎಂದು ಮತ್ತೊಮ್ಮೆ ಹೇಳಿದ ಸಿಎಂ, ಕಾಂಗ್ರೆಸ್ ಅವರಿಗೆ ಆ ದೇವರೇ ಮನಸ್ಸು ಕೊಟ್ಟು ನನಗೆ ಅಧಿಕಾರ ಕೊಡಿಸಿದ್ದಾನೆ. ಯಾರು ಏನೇ ಹೇಳಿದರು ಇದು ದೈವ ಶಕ್ತಿಯ ಅಧಿಕಾರವಾಗಿದೆ. ಬಿಜೆಪಿ ನಾಯಕರು ಸರ್ಕಾರ ಬಿದ್ದು ಹೋಗುತ್ತೆ ಎಂದು ಹೇಳುತ್ತಾರೆ. ಶಾಸಕ ಉಮೇಶ್ ಕತ್ತಿ ಸರ್ಕಾರ ಹೋಗುತ್ತೆ ಅಂದರು. ಹೀಗಾಗಿ ಪಾಪ ಅವರಿಗೆ ಅನುಕೂಲ ಆಗಲಿ ಎಂದು ನಾನು ವಿದೇಶಕ್ಕೆ ಹೋಗಿದ್ದೆ. ಆದರೆ ಏನು ಆಗಿಲ್ಲ. ದೇವರು ನಮ್ಮ ಜೊತೆ ಇದ್ದಾನೆ. ಮನುಷ್ಯ ಊಹಿಸುವುದು ಒಂದು. ಆದರೆ ದೈವದ ಇಚ್ಚೆ ಇನ್ನೊಂದು ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *