ಅಂದು ದುಷ್ಮನ್ ಇಂದು ಭಾಯಿ ಭಾಯಿ – ಬಿಎಸ್‍ವೈ ಕೈ ಕುಲುಕಿದ ಎಚ್‍ಡಿಕೆ

– ಸಾಫ್ಟ್ ಕಾರ್ನರ್ ಚರ್ಚೆಯ ಬೆನ್ನಲ್ಲೇ ಮಾತುಕತೆ
– ಹಾಲಿ, ಮಾಜಿ ಸಿಎಂ ಮುಖಾಮುಖಿ ಭೇಟಿಯಾಗಿ ಹಸ್ತಲಾಘವ
– ಕುತೂಹಲ ಮೂಡಿಸಿದ ಇಬ್ಬರು ನಾಯಕರ ನಡೆ

ಬೆಂಗಳೂರು: ಸರ್ಕಾರ ಬಿದ್ದ ಬಳಿಕ ನೇರವಾಗಿ ಭೇಟಿಯಾಗದ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಮತ್ತು ಸಿಎಂ ಯಡಿಯೂರಪ್ಪ ಇಂದು ಮಧ್ಯಾಹ್ನ ಮುಖಾಮುಖಿಯಾಗಿ ಹಸ್ತಲಾಘವ ಮಾಡಿ ಕುತೂಹಲ ಮೂಡಿಸಿದ್ದಾರೆ.

ತಾಜ್ ವೆಸ್ಟ್ ಎಂಡ್‍ನಲ್ಲಿ ಇಂದು ಮದುವೆ ರಿಸೆಪ್ಶನ್ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಮೊದಲು ಯಡಿಯೂರಪ್ಪ, ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ ಭಾಗವಹಿಸಿ ಕುರ್ಚಿಯಲ್ಲಿ ಕುಳಿತಿದ್ದರು. ಇವರು ಭೇಟಿ ನೀಡಿದ ಬಳಿಕ ಎಚ್‍ಡಿ ಕುಮಾರಸ್ವಾಮಿ ಅವರು ನೇರವಾಗಿ ವೇದಿಕೆಗೆ ತೆರಳಿ ವಧು ವರರಿಗೆ ಶುಭಾಶಯ ಕೋರಿ ಕೆಳಗಿಳಿದಿದ್ದಾರೆ.

ಕುಮಾರಸ್ವಾಮಿ ಅವರು ಕೆಳಗಡೆ ಇಳಿದು ಬಂದಾಗ ಅಲ್ಲೇ ಕುಳಿತ್ತಿದ್ದ ಯಡಿಯೂರಪ್ಪನವರನ್ನು ನೋಡುತ್ತಾರೆ. ಮಾಜಿ ಸಿಎಂ ಹತ್ತಿರ ಬರುತ್ತಿದ್ದಂತೆ ಕುಳಿತಿದ್ದ ಬಿಎಸ್‍ವೈ ಎದ್ದು ನಿಂತು ಹೆಚ್‍ಡಿಕೆಯ ಕೈಕುಲುಕಿ ಮಾತನಾಡುತ್ತಾರೆ. ಬಿಎಸ್‍ವೈ ಕೈ ಕುಲುಕಿದ ನಂತರ ಎಚ್‍ಡಿಕೆ ಬೇರೆ ಕಡೆ ತೆರಳಿದರು. ಇಬ್ಬರು ನಾಯಕರ ಸೌಜನ್ಯದ ಮಾತುಕತೆಯ ವೇಳೆ ಎಸ್‍ಎಂಕೆ, ಡಿವಿಎಸ್, ಎಂ.ಬಿ.ಪಾಟೀಲ್ ಕೂಡ ಸ್ಥಳದಲ್ಲಿ ಇದ್ದರು.

ಕೆಲ ದಿನಗಳಿಂದ ಸಿದ್ದರಾಮಯ್ಯ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸುತ್ತಿರುವ ಎಚ್‍ಡಿ ಕುಮಾರಸ್ವಾಮಿ ಈಗ ಬಿಜೆಪಿ ವಿರುದ್ಧ ಮೃದು ಧೋರಣೆ ತಳೆದಿದ್ದಾರೆ ಎನ್ನುವ ಮಾತು ಚರ್ಚೆಯಾಗುತ್ತಿದೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವನ್ನು ಬೀಳಿಸಲು ಹೋಗುವುದಿಲ್ಲ ಎಂಬ ಎಚ್‍ಡಿಕೆ ಹೇಳಿಕೆಯ ಬೆನ್ನಲ್ಲೇ ಇಬ್ಬರು ನಾಯಕರ ಮಾತುಕತೆ ಈಗ ಚರ್ಚೆಗೆ ಗ್ರಾಸವಾಗಿದೆ.

ಕಳೆದ ವಾರ ಬೆಳಗಾವಿಯಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಿ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರದ ಬಗ್ಗೆ ಮೃದು ಧೋರಣೆ ತೋರುತ್ತಿದ್ದಾರೆ. ಇದನ್ನು ಗಮನಿಸಿದರೆ ಕುಮಾರಸ್ವಾಮಿ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ಒಳ ಒಪ್ಪಂದ ಮಾಡಿಕೊಂಡಂತಿದೆ ಎಂದು ಆರೋಪಿಸಿದ್ದರು.

ಹೆಚ್‍ಡಿಕೆ ಲೆಕ್ಕಾಚಾರ ಏನು?
ಆಪರೇಷನ್ ಕಮಲದಿಂದ ಪಕ್ಷವನ್ನು ಪಾರು ಮಾಡಿ ಬಿಜೆಪಿಗೆ ಜಿಗಿಯಲು ಸಜ್ಜಾಗಿರೋ ಶಾಸಕರನ್ನು ಉಳಿಸಿಕೊಳ್ಳಲು ಎಚ್‍ಡಿಕೆ ಮುಂದಾಗಿದ್ದಾರೆ. ಸಾಫ್ಟ್ ಕಾರ್ನರ್ ತೋರಿಸಿದರೆ ಆಪರೇಷನ್‍ಗೆ ಬಿಜೆಪಿ ಕೈ ಹಾಕಲಾರದು ಹಾಗೂ ತಮ್ಮ ಶಾಸಕರ ಕ್ಷೇತ್ರಗಳಿಗೆ ಸರ್ಕಾರದಿಂದ ಅನುದಾನ ಕೊಡಿಸಲು ನೆರವಾಗಬಹುದು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

ತಮ್ಮ ವಿರುದ್ಧದ ಫೋನ್ ಟ್ಯಾಪಿಂಗ್ ಕೇಸ್ ತನಿಖೆ ಪ್ರಗತಿಯಲ್ಲಿದೆ. ಹೀಗಾಗಿ ಬಿಜೆಪಿ ಮೇಲೆ ದಾಳಿ ಮಾಡಿದರೆ ಡಿಕೆಶಿ ಸ್ಥಿತಿ ಎದುರಾಗಬಹುದು. ಅಲ್ಲದೆ ಭವಿಷ್ಯದಲ್ಲಿ ರಾಜಕೀಯವಾಗಿ ಕಷ್ಟ ಆಗಬಹುದು ಅನ್ನೋ ಭಯಯ ಹೆಚ್‍ಡಿಕೆಗೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈಗ ಸಾಫ್ಟ್ ಕಾರ್ನರ್ ತೋರಿಸಿದರೆ ಮುಂದೆ ಅನುಕೂಲವಾಗಬಹುದು ಎನ್ನವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಕಾಂಗ್ರೆಸ್ ಕೈಕೊಟ್ಟ ಮೇಲೆ ಜೆಡಿಎಸ್ ಪರಿಸ್ಥಿತಿ ಕಷ್ಟವಾಗಿದೆ. ಹೀಗೆ ಮುಂದುವರಿದರೆ ಜೆಡಿಎಸ್ ಭವಿಷ್ಯಕ್ಕೆ ಸಮಸ್ಯೆ ಆಗಬಹುದು. ಹೀಗಾಗಿ ಬಿಜೆಪಿ ಜೊತೆ ದೋಸ್ತಿಗೆ ಬಾಗಿಲು ಓಪನ್ ಮಾಡುವುದು ಸೂಕ್ತ. ಉಪ ಚುನಾವಣೆಯಲ್ಲಿ ಬಿಜೆಪಿಗೆ ಪರೋಕ್ಷ ಬೆಂಬಲ ನೀಡುವುದು. ಈ ಮೂಲಕ ಕೇಂದ್ರ ಕಮಲ ನಾಯಕರ ಮನಸ್ಸು ಗೆಲ್ಲುವುದು. ಈಗ ಕಮಲ ಬೆಂಬಲಿಸಿ ಪಕ್ಷವನ್ನು ಸಂಘಟಿಸಿದರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಲಾಭವಾಗಬಹುದು ಎನ್ನುವ ಲೆಕ್ಕಾಚಾರವನ್ನು ಕುಮಾರಸ್ವಾಮಿ ಹಾಕಿಕೊಂಡಿರಬಹುದು ಎನ್ನುವ ಚರ್ಚೆ ಈಗ ಆರಂಭಗೊಂಡಿದೆ.

Comments

Leave a Reply

Your email address will not be published. Required fields are marked *