ಎಲ್ಲವನ್ನೂ ನಾನೇ ಮಾಡಿದ್ದೇನೆ ಎನ್ನೋ ಗರ್ವ ಇರಬಾರದು: ಪ್ರಧಾನಿ ಮೋದಿಗೆ ಎಚ್‍ಡಿಡಿ ಟಾಂಗ್

– ರೇವಣ್ಣನಿಗೆ ನನ್ನನ್ನು ಮೀರಿ ಕೆಲಸ ಮಾಡೋ ಶಕ್ತಿ ಇದೆ

ಹಾಸನ: ಎಲ್ಲವನ್ನೂ ನಾನೇ ಮಾಡಿದ್ದೇನೆ ಎನ್ನುವ ಗರ್ವ ಇರಬಾರದು ಎಂದು ಹೇಳುವ ಮೂಲಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಟ್ ಕೊಟ್ಟಿದ್ದಾರೆ.

ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ದೇವೇಗೌಡರು, ತಮ್ಮ ಆಡಳಿತ ಅವಧಿಯ ಐದು ವರ್ಷದಲ್ಲಿ ಎಲ್ಲವನ್ನೂ ನಾನು ಸಾಧನೆ ಮಾಡಿದ್ದೇನೆ ಅಂತ ಪ್ರಧಾನಿ ಮೋದಿ ಹೇಳುತ್ತಾರೆ. ಹಾಗಾದರೆ ಈ ಹಿಂದೆ ಯಾರೂ ಅಭಿವೃದ್ಧಿ ಕೆಲಸ ಮಾಡಿಲ್ಲವೇ? ಬ್ರಿಟಿಷರ ಕಾಲದಿಂದಲೂ ಅನೇಕ ಪುಣ್ಯಾತ್ಮರು ಕೆಲಸ ಮಾಡಿಲ್ಲವೇ? ಬ್ರಿಟಿಷರಿಂದ ಭಾರತವನ್ನ ಉಳಿಸಿಕೊಳ್ಳಲಿಲ್ಲವೇ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

ಇದೇ ವೇಳೆ ಲೋಕೋಪಯೋಗಿ ಸಚಿವ, ಪುತ್ರ ಎಚ್.ಡಿ.ರೇವಣ್ಣರನ್ನು ದೇವೇಗೌಡ ಹೊಗಳಿದರು. ರೇವಣ್ಣ ರಾಜಕೀಯಕ್ಕೆ ಬರಬೇಕೆಂದು ನಾನು ಯೋಚನೆ ಮಾಡಿರಲಿಲ್ಲ. ರೇವಣ್ಣನೂ ಯೋಚನೆ ಮಾಡಿರಲಿಲ್ಲ. ಅವನಿಗೆ ಬೆಂಗಳೂರಿನಲ್ಲಿ ಒಂದು ಕಾರ್ಖಾನೆ ಮಾಡೋಣ ಎಂದುಕೊಂಡಿದ್ದೆ. ಆದರೆ ಈಗ ನನ್ನನ್ನು ಮೀರಿ ಕೆಲಸ ಮಾಡುವ ಶಕ್ತಿ ರೇವಣ್ಣನಿಗೆ ಬಂದಿದೆ ಎಂದು ಹೇಳಿದರು.

ನಾನು ಪ್ರಧಾನಿಯಾಗಿ ಅವಿಶ್ವಾಸಮತ ನಿರ್ಣಯವಾದಾಗಲೂ ರೇವಣ್ಣ ರೈಲ್ವೇ ಮಾರ್ಗ ನಿರ್ಮಾಣವಾಗಬೇಕು ಅಂತ ಹಠ ಹಿಡಿದಿದ್ದ. ದೈವ ಇಚ್ಛೆಯಿಂದ ನಮಗೆ ಅಧಿಕಾರ ಬಂದಿದೆ. ನಮ್ಮ ತಂದೆ ತಾಯಿಗಳು ಈಶ್ವರನ ಪೂಜೆ ಮಾಡಿದ್ದಾರೆ. ನಾವೇನಾದರೂ ಇಷ್ಟು ಬೆಳೆದಿದ್ದರೆ ಈಶ್ವರನ ಅನುಗ್ರಹವೇ ಕಾರಣ ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗುತ್ತಾರೆ ಅಂತ ಯಾರೂ ಊಹೆ ಮಾಡಿರಲಿಲ್ಲ. ಇದೇ ದೈವದ ಆಟ ಅವರು ಮುಖ್ಯಮಂತ್ರಿಯಾದರು. ನಮ್ಮ ವಂಶಸ್ಥರು ಅಂದುಕೊಂಡಿದ್ದನ್ನ ಮಕ್ಕಳು ಸಾಧಿಸಿದ್ದಾರೆ. ತಾಂತ್ರಿಕ ವಿಶ್ವವಿದ್ಯಾಲಯವನ್ನು ಹಾಸನಕ್ಕೆ ತರಲು ಕುಮಾರಸ್ವಾಮಿ ಮತ್ತು ರೇವಣ್ಣ ನಡುವೆ ತರ್ಕ ನಡೆದಿತ್ತು. ಈಗ ರೇವಣ್ಣನ ಇಚ್ಛೆಯಂತೆ ತಾಂತ್ರಿಕ ವಿಶ್ವವಿದ್ಯಾಲಯ ಜಿಲ್ಲೆಗೆ ಬಂದಿದೆ ಎಂದು ಮಕ್ಕಳನ್ನು ಕೊಂಡಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *