ಹಾವೇರಿ: ತಹಶೀಲ್ದಾರ್ ಭೇಟಿ ವೇಳೆ ವೈದ್ಯಾಧಿಕಾರಿ ಆಸ್ಪತ್ರೆಯಲ್ಲಿ ಇಲ್ಲದ್ದಕ್ಕೆ ತಹಶೀಲ್ದಾರ್ ಬಾಯಿಗೆ ಬಂದಂತೆ ಮಾತನಾಡಿದ್ದು, ಈ ವೇಳೆ ಇಬ್ಬರ ನಡುವೆ ಏಕವಚನದಲ್ಲೇ ವಾಗ್ವಾದ ನಡೆದಿದೆ. ಅಲ್ಲದೆ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಭಾನುವಾರ ಮಧ್ಯಾಹ್ನ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾನಗಲ್ ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್ ಭೇಟಿ ನೀಡಿದ್ದರು. ಈ ವೇಳೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಾಘವೇಂದ್ರ ಆಸ್ಪತ್ರೆಯಲ್ಲಿ ಇರಲಿಲ್ಲ. ವೈದ್ಯ ಡಾ.ರಾಘವೇಂದ್ರ ಆಸ್ಪತ್ರೆಯಲ್ಲಿ ಇಲ್ಲದ್ದನ್ನು ತಹಶೀಲ್ದಾರ ಎರ್ರಿಸ್ವಾಮಿ ಪ್ರಶ್ನಿಸಿದ್ದಾರೆ. ಅಷ್ಟರಲ್ಲಿ ಡಾ.ರಾಘವೇಂದ್ರ ಸ್ಥಳಕ್ಕೆ ಆಗಮಿಸಿದ್ದಾರೆ ಈ ವೇಳೆ ಇಬ್ಬರ ನಡುವೆ ವಾಗ್ವಾದ ಆರಂಭವಾಗಿದೆ.

ನಂತರ ಆಸ್ಪತ್ರೆ ಮುಂಭಾಗದಲ್ಲಿ ವೈದ್ಯಾಧಿಕಾರಿ ಮತ್ತು ತಹಶೀಲ್ದಾರ ಇಬ್ಬರೂ ಪರಸ್ಪರ ಏಕವಚನದಲ್ಲಿ ನಿಂದಿಸಿದ್ದಾರೆ. ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಸ್ಥಳೀಯರು ಹಾಗೂ ಪೊಲೀಸರು ಇಬ್ಬರ ನಡುವಿನ ಫೈಟಿಂಗ್ ಶಮನಕ್ಕೆ ಪ್ರಯತ್ನಿಸಿದರು. ಆದರೆ ಇಬ್ಬರ ನಡುವಿನ ಏಕವಚನದ ಟಾಕ್ ಫೈಟ್ ಮುಂದುವರಿದಿತ್ತು. ನಂತರ ಆಸ್ಪತ್ರೆಗೆ ಬೀಗ ಹಾಕಲಾಯಿತು. ಇಬ್ಬರ ಫೈಟಿಂಗ್ ನೋಡಿದ ರೋಗಿಗಳು ಕಂಗಾಲಾದರು.
ಹಾನಗಲ್ ತಹಶೀಲ್ದಾರ್ ನನ್ನ ಮೇಲೆ ದೈಹಿಕ ದೌರ್ಜನ್ಯ ಮಾಡಿದ್ದಲ್ಲದೇ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಾಘವೇಂದ್ರ ಆರೋಪಿಸಿದರು. ತಹಶೀಲ್ದಾರ್ ಈ ಆರೋಪವನ್ನು ಅಲ್ಲಗಳೆದಿದ್ದು, ಜನರ ದೂರಿನ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಆಸ್ಪತ್ರೆಯಲ್ಲಿ ಇಲ್ಲದ್ದನ್ನು ಪ್ರಶ್ನಿಸಿದ್ದಕ್ಕೆ ಡಾ.ರಾಘವೇಂದ್ರ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

Leave a Reply