ಹುಕ್ಕೇರಿಮಠದ ಜಾತ್ರೆಯ ಪ್ರಯುಕ್ತ ಉಚಿತ ನೇತ್ರ ತಪಾಸಣೆ ಶಿಬಿರ

ಹಾವೇರಿ: ಹುಕ್ಕೇರಿಮಠದ ಜಾತ್ರೆಯ ಪ್ರಯುಕ್ತ ಉಚಿತ ನೇತ್ರ ತಪಾಸಣೆ ಶಿಬಿರ ನಡೆಸಲಾಯ್ತು.

ನಮ್ಮ ಜಗತ್ತು ಅತೀ ಸುಂದರವಾಗಿದ್ದು ಅದನ್ನು ಆಸ್ವಾದಿಸಲು ಭಗವಂತ ನೀಡಿರುವ ಕಣ್ಣುಗಳು ಅಮೂಲ್ಯ ಸಂಪತ್ತುಗಳಾಗಿದ್ದು ಅವುಗಳನ್ನು ಸೂಕ್ತವಾಗಿ ಕಾಪಾಡಬೇಕೆಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ನಗರದ ಹುಕ್ಕೇರಿಮಠದಲ್ಲಿ ಲಿಂ.ಶಿವಬಸವ ಸ್ವಾಮಿಗಳ 74 ನೇ ಮತ್ತು ಲಿಂ.ಶಿವಲಿಂಗ ಸ್ವಾಮಿಗಳ 11 ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಉತ್ಸವ ಸಮಿತಿ, ಲಯನ್ಸ ಕ್ಲಬ್, ದಿಶಾ ಪೌಂಡೇಶನ್, ಜಿಲ್ಲಾ ನೇತ್ರ ಘಟಕ ಹಾವೇರಿ, ಶಂಕರ ಕಣ್ಣಿನ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಉಚಿತ ನೇತ್ರ ಚಿಕಿತ್ಸೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಶರೀರವು ಅದ್ಭುತ ರಚನೆಯಾಗಿದ್ದು, ಪ್ರತಿ ಅಂಗವು ವಿಶಿಷ್ಟತೆಯನ್ನು ಹೊಂದಿದೆ. ಅದರಲ್ಲಿಯೂ ಕಣ್ಣುಗಳು ಅತೀ ಮುಖ್ಯವಾಗಿದ್ದು, ಕುರುಡನನ್ನು ಕೇಳಿದರೆ ಕಣ್ಣಿನ ಮಹತ್ವ ಗೊತ್ತಾಗುತ್ತದೆ. ಅದನ್ನು ಧೂಳಿನಿಂದ, ವಿಕಿರಣಗಳಿಂದ, ಪಟಾಕಿಗಳಿಂದ ನಾವೇ ಹಾಳು ಮಾಡಿಕೊಳ್ಳುತ್ತೇವೆ. 40ರ ನಂತರ ನಿಯಮಿತವಾಗಿ ನುರಿತ ವೈದ್ಯರಿಂದ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.

ಅಕ್ಕಿ ಆಲೂರಿನ ಶಿವಬಸವ ಸ್ವಾಮೀಜಿ ಮಾತನಾಡಿ, ನೇತ್ರದಾನವು ಅತೀ ಶ್ರೇಷ್ಠವಾಗಿದ್ದು, ಮರಣದ ನಂತರವೂ ನಾವು ಈ ಜಗತ್ತನ್ನು ನೋಡಲು ಸಾಧ್ಯವಾಗುತ್ತದೆ. ಆದ್ದರಿಂದ ಮಣ್ಣಲ್ಲಿ ಮಣ್ಣಾಗುವ ಬದಲು ಪ್ರತಿಯೊಬ್ಬರೂ ನೇತ್ರದಾನ ಮಾಡಬೇಕೇಂದು ಹೇಳಿದರು. ಜಿಲ್ಲಾ ನೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಎಂರಾಜಶೇಖರ್, ಡಾ. ನಾಗರಾಜ್ ನಾಯಕ್, ಡಾ. ರಾಜೇಂದ್ರ ದೊಡ್ಡಮನಿ, ಡಾ. ಸಿ.ಎಸ್.ವಿರಕ್ತಮಠ ಮತ್ತು ಡಾ. ದಾಕ್ಷಾಯಣಿ ಕಣ್ಣಿನ ತಪಾಸಣೆ ಮಾಡಿದರು.

ಸಮಾರಂಭದಲ್ಲಿ ಬಸವರಾಜ್ ಕೇಸರಿ, ಸುನಿಲ್ ಸನಣೂರ, ರೇಖಾ ಬಿ ಶೆಟ್ಟಿ, ಲಯನ್ಸ್ ಕ್ಲಬ್‍ನ ಪ್ರೋ ಪಿ.ಸಿ.ಹಿರೇಮಠ, ನಿತೀನ್ ಹೊರಡಿ, ನವೀನಕುಮಾರ್ ಹಾವನೂರು, ಶಿವಮೂರ್ತಿ ಸಾದರ, ಮಹಾಂತೇಶ್ ಮಳಿಮಠ, ಮಹೇಶ್ ಹೆಬ್ಬಳ್ಳಿ, ರಾಚಣ್ಣ ಮಾಗನೂರ, ಅಶೋಕ್ ಹೇರೂರ, ದಯಾನಂದ್ ಯಡ್ರಾಮಿ, ಆನಂದ್ ಅಟವಾಳಗಿ, ಶಂಕರ್ ಆಸ್ಪತ್ರೆಯ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು. ಒಟ್ಟು 342 ರೋಗಿಗಳು ನೇತ್ರ ಚಿಕಿತ್ಸೆಗೆ ಒಳಪಟ್ಟರು. 154 ಜನರು ಶಸ್ತ್ರ ಚಿಕಿತ್ಸೆ ನೋಂದಣಿಯಾದರು.

Comments

Leave a Reply

Your email address will not be published. Required fields are marked *