ಚಡ್ಡಿ ಹಾಕಿರೋ ಮಹಿಳೆಯರನ್ನ ನೋಡಿದ್ದೀರಾ: ರಾಹುಲ್ ಹೇಳಿಕೆಗೆ ಆರ್‍ಎಸ್‍ಎಸ್ ತಿರುಗೇಟು

ಭೋಪಾಲ್: ಆರ್‍ಎಸ್‍ಎಸ್ ಸ್ವಯಂ ಸೇವಾ ಸಂಘಟನೆಯು ಮಹಿಳೆಯರಿಗೆ ಉತ್ತಮ ಸ್ಥಾನಮಾನವನ್ನು ನೀಡುವುದಿಲ್ಲ ಎನ್ನುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಆರೋಪಕ್ಕೆ ಆರ್‍ಎಸ್‍ಎಸ್ ತಿರುಗೇಟು ನೀಡಿದೆ.

ರಾಹುಲ್ ಗಾಂಧಿ ತಪ್ಪು ತಪ್ಪು ಪ್ರಶ್ನೆಗಳನ್ನು ಕೇಳುತ್ತಿದ್ದು, ಸೇಬು ಹಣ್ಣನ್ನು ಕಿತ್ತಳೆ ಹಣ್ಣಿನೊಂದಿಗೆ ಹೋಲಿಸುತ್ತಿದ್ದಾರೆ ಎಂದು ಆರ್‍ಎಸ್‍ಎಸ್‍ನ ಹಿರಿಯ ನಾಯಕ ಮನಮೋಹನ್ ವೈದ್ಯ ತಿಳಿಸಿದ್ದಾರೆ.

ಇದು ರಾಹುಲ್ ಗಾಂಧಿ ಅವರ ತಪ್ಪಲ್ಲ. ರಾಹುಲ್ ಭಾಷಣವನ್ನು ಬರೆದುಕೊಡುತ್ತಿರುವವರ ತಪ್ಪು. ಬರಹಗಾರರ ಭಾಷಣ ಇವರಿಗೆ ಅರ್ಥವಾಗುತ್ತಿಲ್ಲ. ರಾಹುಲ್ ಅವರಿಗೆ ಮತ್ತಷ್ಟು ಉತ್ತಮ ಬರಹಗಾರರ ಅವಶ್ಯಕತೆ ಇದೆ ಎಂದು ಮನಮೋಹನ್ ವೈದ್ಯ ಬುಧವಾರ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಹೇಳಿದರು.

ರಾಹುಲ್ ಹೇಳಿಕೆ ಪುರುಷ ಹಾಕಿ ಪಂದ್ಯದಲ್ಲಿ ಮಹಿಳಾ ಆಟಗಾರ್ತಿಯರನ್ನು ಹುಡುಕಿದಂತೆ. ಮಹಿಳಾ ಆಟಗಾರ್ತಿಯರನ್ನು ನೋಡ ಬೇಕಾದರೆ ಮಹಿಳಾ ಹಾಕಿ ಪಂದ್ಯಗಳಿಗೆ ಹೋಗಬೇಕು. ಹಾಗೆಯೇ ಆರ್‍ಎಸ್‍ಎಸ್ ಸಂಘಟನೆ ಪುರುಷರಿಗಾಗಿ ಮಾತ್ರ ಕ್ಯಾಂಪ್‍ಗಳನ್ನು ನಡೆಸುತ್ತದೆ, ಅಂದರೇ ಮಹಿಳೆಯರೊಂದಿಗೆ ಇದು ಕೆಲಸ ಮಾಡುವುದಿಲ್ಲ ಎಂದರ್ಥವಲ್ಲ ಎಂದು ಮನಮೋಹನ್ ಹೇಳಿದರು.

ಇದೇ ವೇಳೆ ಆರ್‍ಎಸ್‍ಎಸ್ ಸಂಘಟನೆಯನ್ನು ಬೇರ ಯಾವ ರಾಜಕೀಯ ಪಕ್ಷದೊಂದಿಗೂ ಹೋಲಿಸುವ ಅಗತ್ಯವಿಲ್ಲ ಎಂದರು.

ಗುಜರಾತ್‍ನ ಅಕೋಟಾದ ಸಭೆಯೊಂದರಲ್ಲಿ ಮಂಗಳವಾರ ಭಾಗವಹಿಸಿದ ರಾಹುಲ್ ಗಾಂಧಿ, ಮಹಿಳೆಯರ ವಿರುದ್ಧ ಬಿಜೆಪಿ ಮತ್ತು ಆರೆಸ್ಸೆಸ್ ತಾರತಮ್ಯವೆಸಗುತ್ತಿವೆ. ಅಲ್ಲದೇ ಬಿಜೆಪಿ ಪ್ರಧಾನ ಸಂಘಟನೆಯಾ ಆರ್‍ಎಸ್‍ಎಸ್‍ನಲ್ಲಿ ಎಷ್ಟು ಮಂದಿ ಮಹಿಳೆಯರಿದ್ದಾರೆ? ಆರೆಸ್ಸೆಸ್ ಶಾಖೆಗಳಲ್ಲಿ ಚಡ್ಡಿ ಧರಿಸಿದ ಮಹಿಳೆಯರನ್ನು ಯಾರಾದರೂ ನೋಡಿದ್ದೀರಾ? ನಾನಂತೂ ನೋಡಿಲ್ಲ ಎಂದು ಹೇಳಿದ್ದರು. ಅಲ್ಲದೇ ಕಾಂಗ್ರೆಸ್‍ಗೆ ಮತ್ತೆ ಅಧಿಕಾರ ನೀಡಿದರೆ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡುತ್ತೇವೆ. ಶಿಕ್ಷಣ, ಆರೋಗ್ಯ ಪಾಲನೆ ನಮ್ಮ ಆದ್ಯತೆ ಎಂಬ ಆಶ್ವಾಸನೆಯನ್ನು ನೀಡಿದ್ದರು.

Comments

Leave a Reply

Your email address will not be published. Required fields are marked *