ಮದುವೆ ವಿಚಾರ ಮುಚ್ಚಿಟ್ಟಿದ್ದಾರೆ – ಸೂರಜ್ ರೇವಣ್ಣರ ನಾಮಪತ್ರ ತಿರಸ್ಕರಿಸಿ

Suraj revanna

ಹಾಸನ: ಸೂರಜ್ ರೇವಣ್ಣ ಅವರು ನಾಮಪತ್ರ ಸಲ್ಲಿಸುವಾಗ ಸುಳ್ಳು ದಾಖಲೆಯನ್ನು ನೀಡಿದ್ದು, ಇವರ ಅರ್ಜಿಯನ್ನು ಈ ಕೂಡಲೇ ತಿರಸ್ಕರಿಸುವಂತೆ ವಕೀಲ ದೇವರಾಜೇಗೌಡ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಅಧಿಕಾರಿಗಳ ಬಳಿ ನಾಮಪತ್ರದ ನಕಲನ್ನು ತೆಗೆದುಕೊಂಡು ಅದನ್ನು ಪರೀಕ್ಷಿಸಲಾಗಿದೆ. ಅದರಲ್ಲಿ ಸುಳ್ಳು ಅರ್ಜಿಯನ್ನು ನೀಡಿರುವುದು ಬಹಿರಂಗವಾಗಿದೆ. ಅವರು ನಾಮಪತ್ರ ಸಲ್ಲಿಸುವಾಗ ಗಂಭೀರ ವಿಷಯಗಳನ್ನು ಮುಚ್ಚಿಟ್ಟಿದ್ದಾರೆ. ಮದುವೆಯ ಬಗ್ಗೆ ಸತ್ಯವನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದರು.

ಮದುವೆ ವಿಷಯವಾಗಿ ಯಾವುದೇ ಸಂಬಂಧವಿಲ್ಲ ಎಂದು ಸೂರಜ್ ರೇವಣ್ಣ ಅವರು ಅರ್ಜಿಯಲ್ಲಿ ನಮೂದಿಸಿದ್ದಾರೆ. ಪ್ರಜಾಪ್ರಭುತ್ವ ಕಾಯ್ದೆ ಪ್ರಕಾರವಾಗಿ ಅರ್ಜಿಯಲ್ಲಿ ಮದುವೆಯ ವಿಷಯವನ್ನು ಉಲ್ಲೇಖಿಸಬೇಕಿತ್ತು. ಒಂದು ವೇಳೆ ಮದುವೆ ಆಗಿದ್ದರೆ ಆಗಿದೆ ಎಂದು, ಆಗಿಲ್ಲವಾಗಿದ್ದರೆ ಆಗಿಲ್ಲ ಎಂದು ಬರೆಯಬೇಕಿತ್ತು. ಅವರು ಮದುವೆ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪತ್ನಿಯ ಚರ, ಸ್ಥಿರ ಆಸ್ತಿಗಳ ಬಗ್ಗೆ ದಾಖಲಿಸಬೇಕಿತ್ತು ಎಂದರು.

ಈ ವೇಳೆ ಪ್ರಧಾನಿ ಮೋದಿ ಅವರು ನಾಮಪತ್ರ ಸಲ್ಲಿಸುವಾಗ ತಮ್ಮ ಪತ್ನಿಯ ಕುರಿತು ಉಲ್ಲೇಖಿಸಿದ್ದಾರೆ ಎಂದು ನೆನಪಿಸಿಕೊಂಡರು.

ಸೂರಜ್ ರೇವಣ್ಣ ಅವರು ಯಾವ ಕಾರಣಕ್ಕಾಗಿ ನಾಮಪತ್ರದಲ್ಲಿ ಮದುವೆಯ ಕುರಿತು ಉಲ್ಲೇಖಿಸಿಲ್ಲ ಎನ್ನುವುದರ ಕುರಿತು ಈಗಾಗಲೇ ಚುನಾವಣಾ ಅಧಿಕಾರಿಗಗಳಿಗೆ ಹಾಗೂ ಇಲ್ಲಿನ ಸ್ಥಳೀಯ ಅಧಿಕಾರಿಗಳಿಗೆ ಮನವಿಯನ್ನು ನೀಡಿದ್ದು, ಸೂರಜ್ ರೇವಣ್ಣ ಅವರ ನಾಮಪತ್ರ ತಿರಸ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಒಂದು ವೇಳೆ ಅರ್ಜಿ ತಿರಸ್ಕರಿಸದಿದ್ದರೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ. ಈ ಎಲ್ಲಾ ದಾಖಲೆಗಳನ್ನು ನಾಳೆ ಬೆಳಗ್ಗೆ ಹೈಕೋರ್ಟ್‍ನಲ್ಲಿ ರಿಟ್ ಫೈಲ್ ದಾಖಲಿಸಲಾಗುವುದು ಎಂದು ತಿಳಿಸಿದರು. ಸೂರಜ್ ರೇವಣ್ಣ ಅವರು ನೀಡಿರುವ ನಾಮಪತ್ರವನ್ನು ತಿರಸ್ಕರಿಸಬೇಕು. ಇಲ್ಲದಿದ್ದರೇ ತನಿಖೆ ಮುಗಿಯುವವರೆಗೆ ಚುನಾವಣೆಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

Comments

Leave a Reply

Your email address will not be published. Required fields are marked *