ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು: ಜೆಡಿಎಸ್ ಶಾಸಕ ಶಿವಲಿಂಗೇಗೌಡ

ಹಾಸನ: ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗಬೇಕು, ಅವರು ಆರಂಭಿಸಿದ ಯೋಜನೆಗಳು ಪೂರ್ಣಗೊಳ್ಳಲು ಅವರೇ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಹಾಸನ ಜಿಲ್ಲೆಯ ಜೆಡಿಎಸ್ ಶಾಸಕ ಕೆಎಂ ಶಿವಲಿಂಗೇಗೌಡ ಪರೋಕ್ಷವಾಗಿ ಕಾಂಗ್ರೆಸ್ ಪರ ಬ್ಯಾಟ್ ಬೀಸಿದ್ದಾರೆ.

ಅರಸೀಕೆರೆಯ ಗಂಗೇಮಡು ಗ್ರಾಮದಲ್ಲಿ ಕಾಗಿನೆಲೆ ಪೀಠದ ಶಾಖಾ ಮಠದ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಲಿಂಗೇಗೌಡರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಹಾಡಿ ಹೊಗಳಿದರು.

ಹಿಂದೆ ಒಂದೇ ಪಕ್ಷದಲ್ಲಿದ್ದವರು. ಪಕ್ಷ ತೊರೆದ ನಂತರವೂ ಅವರ ನಾಯಕತ್ವವನ್ನು ನಾನು ನಂಬಿದ್ದೇನೆ. ನನ್ನ ಕ್ಷೇತ್ರಾದ್ಯಂತ ಹಲವು ಕಾಮಗಾರಿಗಳಿಗೆ ಅವರು ಅನುಮೋದನೆ ಕೊಟ್ಟು ಹಣವನ್ನು ಬಿಡುಗಡೆ ಮಾಡಿದ್ದಾರೆ. ಆ ಯೋಜನೆಗಳು ಮತ್ತೆ ಪೂರ್ಣಗೊಳ್ಳೊದಿಕ್ಕೆ ಸಿದ್ದರಾಮಯ್ಯನವರೇ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ತಮ್ಮ ಮನದಾಸೆಯನ್ನು ಹೊರಗೆಡವಿದರು.

ಮೈತ್ರಿ ಸರ್ಕಾರ ಪತನದ ಬಳಿಕ ಜೆಡಿಎಸ್ ನಲ್ಲಿ ಅಂತರ್ಯುದ್ಧವೇ ಆರಂಭಗೊಂಡಿದೆ. ಅಧಿಕಾರ ಕಳೆದುಕೊಂಡ ಬಳಿಕ ಜೆಡಿಎಸ್ ಶಾಸಕರು ಬಿಜೆಪಿ ನಾಯಕರನ್ನು ಹೊಗಳಿ, ಸ್ವಪಕ್ಷದ ಮುಖಂಡರ ವಿರುದ್ಧ ಕಿಡಿಕಾರಿದ್ದರು. ಮಾಜಿ ಸಚಿವರಾದ ಜಿ.ಟಿ.ದೇವೇಗೌಡ ಮತ್ತು ಎಸ್.ಆರ್.ಶ್ರೀನಿವಾಸ್ ಬಿಜೆಪಿಯನ್ನು ಹೊಗಳಿ ಜೆಡಿಎಸ್ ವರಿಷ್ಠರಿಗೆ ಟಾಂಗ್ ಕೊಟ್ಟಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಜೆಡಿಎಸ್ ನ ಕೆಲ ಶಾಸಕರು ಪಕ್ಷ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

Comments

Leave a Reply

Your email address will not be published. Required fields are marked *