ಬಸವರಾಜು ಎಂಪಿ ಆಗಲು ಅನ್ ಫಿಟ್, ಅವನಿಗೆ ಪ್ರಾಕ್ಟಿಕಲ್ ಆಗಿ ಏನೂ ಗೊತ್ತಿಲ್ಲ – ರೇವಣ್ಣ

ಹಾಸನ: ತುಮಕೂರು ಸಂಸದ ಬಸವರಾಜು ಎಂಪಿ ಆಗೋಕೆ ಅನ್ ಫಿಟ್, ಅವನಿಗೆ ಪ್ರಾಕ್ಟಿಕಲ್ ಆಗಿ ಏನೂ ಗೊತ್ತಿಲ್ಲ ಎಂದು ಲೋಕೋಪಯೋಗಿ ಸಚಿವರು ರೇವಣ್ಣ ಅವರು ಏಕವಚನದಲ್ಲಿ ವಾಗ್ದಾಳಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಮಾವತಿ ನದಿಯಿಂದ ತುಮಕೂರಿಗೆ ನೀರು ಬಿಡುವುದಿಲ್ಲ ಎಂದು ಆರೋಪ ಮಾಡಿದ್ದ ಬಸವರಾಜು ಅವರನ್ನು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು.

ಕಳೆದ ಬಾರಿಯೂ ಬಿಜೆಪಿಯವರೇ ಮಂತ್ರಿಯಾಗಿದ್ದರು ಆಗ ನೀರು ಬಿಡಿಸಬೇಕಿತ್ತು. ಈಗ ಅವರೇ ಸಂಸದರಾಗಿದ್ದಾರೆ ಚಾನೆಲ್ ಬೀಗ ಕೊಡುತ್ತೇನೆ ಬಿಟ್ಟುಕೊಳ್ಳಲಿ. 2006ರಲ್ಲಿ ಕುಮಾರಸ್ವಾಮಿ ಅವರ 20-20 ಸರ್ಕಾರದಲ್ಲಿಯೇ ನಾವು ತುಮಕೂರು ಜಿಲ್ಲೆಗೆ ನೀರಾವರಿ ಕಲ್ಪಿಸಿದ್ದೆವು. ಕೆಳಮಟ್ಟದ ರಾಜಕೀಯ ಮಾಡಬಾರದು ಎಂದು ಹೇಳಿ ಈಗ ಅವರೇ ಮಾಡುತ್ತಿದ್ದಾರೆ ಅವರಿಗೆ ನಾಚಿಕೆಯಾಗಬೇಕು. ಮೊದಲು ಚಾನೆಲ್‍ಗಳಲ್ಲಿ ದೊಡ್ಡ ಗಾತ್ರದ ಮರಗಳು ಬೆಳೆದಿದೆ ಅದನ್ನು ಕ್ಲೀನ್ ಮಾಡಿಸಲಿ ಎಂದು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ವಿಚಾರ ಬಗ್ಗೆ ಮಾತನಾಡಿ, ಕಳೆದ ಬಾರಿಯೂ ಸಿಎಂ ಗ್ರಾಮ ವಾಸ್ತವ್ಯ ಮಾಡಿದ್ದರು. ಅದರಂತೆ ಈ ಬಾರಿಯು ಪ್ರತಿ ಜಿಲ್ಲೆಯ ಒಂದು ಗ್ರಾಮದಲ್ಲಿ ಸಿಎಂ ವಾಸ್ತವ್ಯ ಮಾಡಲಿದ್ದಾರೆ. 48 ಸಾವಿರ ಕೋಟಿ ಸಾಲಮನ್ನಾ ಮಾಡಿರುವ ಸಿಎಂ ರೈತರ ಸಮಸ್ಯೆ ಬಗೆಹರಿಸಲು ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಎಲ್ಲಾ ರಾಜ್ಯಗಳಿಗೆ ತ್ರಿಭಾಷಾ ಸೂತ್ರ ಹೇರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕನ್ನಡ ಉಳಿಯಬೇಕು ಅದರ ಬಗ್ಗೆ ಪ್ರಶ್ನೆಯೇ ಇಲ್ಲ. ಒಂದು ವೇಳೆ ತ್ರಿಭಾಷಾ ಸೂತ್ರ ಅನುಸರಿಸಬೇಕು ಎಂದು ಕೇಂದ್ರ ಸರ್ಕಾರ ಒತ್ತಡ ಹಾಕಿದರೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *