ಎಚ್‍ಡಿಡಿ ಡಿಕ್ಷನರಿಯಲ್ಲಿ ಕೊನೆ ಚುನಾವಣೆ ಅಂದ್ರೆ ಏನು – ಎಸ್‍ಎಂಕೆ ಟಾಂಗ್

ಹಾಸನ: ಯಾವಾಗಲೂ ಇದು ನನ್ನ ಕೊನೆಯ ಚುನಾವಣೆ ಎನ್ನುವ ಮಾಜಿ ಪ್ರಧಾನಿ ದೇವೇಗೌಡರ ಡಿಕ್ಷನರಿಯಲ್ಲಿ ಕೊನೆಯ ಚುನಾವಣೆ ಅಂದ್ರೆ ಏನು ಎಂದು ಕೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಟಾಂಗ್ ನೀಡಿದ್ದಾರೆ.

ಹಾಸನದಲ್ಲಿ ಕೃಷ್ಣ ಅವರು ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಾನು ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಅದಾದ ಮೇಲೆ ನಾನು ಮತ್ತೆ ಎಲ್ಲೂ ಸ್ಪರ್ಧಿಸಿಲ್ಲ ಎಂದು ಹೇಳಿ ದೇವೇಗೌಡರನ್ನು ಕುಟುಕಿದ್ರು.

ಯಾವಾಗಲೂ ಇದು ನನ್ನ ಕೊನೆಯ ಚುನಾವಣೆ ಎನ್ನುವ ದೇವೇಗೌಡರ ಡಿಕ್ಷನರಿಯಲ್ಲಿ ಕೊನೆಯ ಚುನಾವಣೆ ಅಂದ್ರೆ ಏನು ಎಂದು ಪ್ರಶ್ನಿಸಿದ್ರು. ಮೋದಿ ಕಿತ್ತೊಗೆಯುತ್ತೇನೆ ಎಂಬುದು ದೇವೇಗೌಡರ ಅಭಿಪ್ರಾಯವಾಗಿತ್ತು. ಈಗಲೂ ಅದನ್ನೇ ಪೋಷಿಸಿಕೊಂಡು ಬಂದಿದ್ದಾರೆ. ಆದ್ರೆ ದೇಶದ ರೈತರು ಈ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದರು.

ಅಕ್ರಮಗಳು ಎಲ್ಲಿ ಆಗುತ್ತಿವೆ. ಅಲ್ಲಿ ಅದನ್ನ ದಯ-ದಾಕ್ಷ್ಯಿಣ್ಯವಿಲ್ಲದೆ ತಡೆಯಲಿ ಆದಾಯ ತೆರಿಗೆ ಇಲಾಖೆ ಇದೆ. ಯಾವುದೋ ಕಂಟ್ರಾಕ್ಟರ್ ಮೇಲೆ ಐಟಿ ದಾಳಿಯಾದ್ರೆ ರಾಜಕಾರಣಿಗಳಿಗೆ ಯಾಕೆ ಹೊಟ್ಟೆ ನೋವು ಬರುತ್ತೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ಮತ್ತೆ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಲಿದ್ದಾರೆ. ಇದಕ್ಕೆ ಪೂರಕ ವಾತಾವರಣ ರಾಜ್ಯದಲ್ಲಿ ಕಂಡು ಬರುತ್ತಿದೆ. ಬಿಜೆಪಿ ಕಾರ್ಯಕರ್ತರಲ್ಲಿ ದೊಡ್ಡ ಪ್ರಮಾಣದ ಆತ್ಮವಿಶ್ವಾಸ ಇದೆ. ಇದರಿಂದ ರಾಜ್ಯದಲ್ಲಿ ಹೆಚ್ಚು ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಮುಂದುವರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಹಾಘಟಬಂಧನ್ ಅಲ್ಲ ಘಟಬಂಧನ್ ಕೂಡ ಇಲ್ಲ. ಉತ್ತರ ಪ್ರದೇಶದಲ್ಲಿ ಘಟಬಂಧನ್ ಮಾಡಿಕೊಂಡಿರುವ ಬಹುಜನ ಪಕ್ಷ ಮತ್ತು ಸಮಾಜವಾದಿ ಪಕ್ಷ ಕಾಂಗ್ರಸ್ ಗೆ ಕೇವಲ 2 ಸ್ಥಾನ ಬಿಟ್ಟು ಕೊಟ್ಟಿದೆ. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ಮಾಯಾವತಿ ಸಾರಿ ಸಾರಿ ಹೇಳಿದ್ದಾರೆ. ಇದು ಕಾಂಗ್ರಸ್ ಮುಕ್ತ ಘಟಬಂಧನ್ ಎಂದು ಹೇಳಿದ್ರು.

ಮೋದಿ ಅವರು ಎಲ್ಲಿ? ಈ ಘಟಬಂಧನ್ ಎಲ್ಲಿ? ಮೋದಿ ಅವರ ವರ್ಚಸ್ ಏನು, ವ್ಯಕ್ತಿತ್ವವೇನು? ಮೋದಿಯವರು 5 ವರ್ಷದಲ್ಲಿ ಮಾಡಿರೋ ಸಾಧನೆ ಏನು? ಎಂದು ಪ್ರಶ್ನೆ ಮಾಡಿದರು.

ರಾಹುಲ್ ಗಾಂಧಿ ಕೇರಳದಿಂದ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 25 ವರ್ಷ ಆದವರು ಯಾರು ಎಲ್ಲಿ ಬೇಕಾದ್ರೂ ನಿಲ್ಲಬಹುದು. ಸ್ಮೃತಿ ಇರಾನಿಯವರು ಅಮೇಥಿಯಲ್ಲಿ ಕಳೆದ 5 ವರ್ಷದಿಂದ ಸಕ್ರಿಯವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಆ ಕಾರಣದಿಂದ ರಾಹುಲ್ ಕೇರಳದಲ್ಲಿ ನಿಲ್ಲುತ್ತಿರಬಹುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ಸೋಲಿನ ಭಯದಿಂದ ರಾಹುಲ್ ಕೇರಳದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ರು.

ಕೇಂದ್ರ ಸರಕಾರ ನಮಗೆ ದುರುದ್ದೇಶದಿಂದ ಹೆಲಿಕಾಪ್ಟರ್ ತಡೆ ಹಿಡಿದಿದೆ ಎಂಬ ಸಿಎಂ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹೆಲಿಕಾಪ್ಟರ್ ಕೊಂಡುಕೊಳ್ಳಬಹುದು ಅಷ್ಟು ಸಾಮರ್ಥ್ಯ ಸಿಎಂಗೆ ಇದೆ ಎಂದು ಇದೇ ವೇಳೆ ಎಚ್‍ಡಿಕೆಗೆ ಟಾಂಗ್ ನೀಡಿದ್ರು.

ಮಾಜಿ ಸಿಎಂ ಎಸ್.ಎಂ.ಕೃಷ್ಣ ಹಾಸನಕ್ಕೆ ಎಂಟ್ರಿಯಾಗುತ್ತಿದ್ದಂತೆಯೇ ಹಾಸನ ಹೊರವಲಯದ ಬೂವನಹಳ್ಳಿಯಲ್ಲಿ ಚುನಾವಣಾ ಅಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *