ಛತ್ತೀಸ್‍ಗಢ ನಕ್ಸಲ್ ದಾಳಿ – ಹಾಸನ ಮೂಲದ ಸಿಆರ್‌ಪಿಎಫ್ ಯೋಧ ಹುತಾತ್ಮ

ಹಾಸನ: ಛತ್ತೀಸ್‍ಗಢದ ಸುಕ್ಮಾ ಪ್ರದೇಶದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಕ್ಸಲರು ನಡೆಸಿದ ದಾಳಿಯಲ್ಲಿ ಹಾಸನ ಮೂಲದ ಯೋಧ ವೀರ ಮರಣವನ್ನಪ್ಪಿದ್ದಾರೆ.

ಜಿಲ್ಲೆಯ ಅರಕಲಗೂಡು ತಾಲೂಕಿನ ಹರದೂರು ಗ್ರಾಮದ ಎಚ್ ಎಸ್ ಚಂದ್ರ (29) ಹುತಾತ್ಮರಾದ ಯೋಧ. ಯೋಧನ ಸಾವಿನ ಸುದ್ದಿ ತಿಳಿದ ಕುಟುಂಬದಲ್ಲಿ ಮೌನ ಮಡುಗಟ್ಟಿದೆ. ಇಂದು ನಕ್ಸಲರು ಸಿಆರ್ ಪಿಎಫ್ ನ 212 ಬೆಟಲಿಯನ್ ಮುಖ್ಯ ವಾಹನದ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸುಮಾರು 9 ಯೋಧರು ಮೃತಪಟ್ಟು, 6 ಯೋಧರು ತೀವ್ರವಾಗಿ ಗಾಯಗೊಂಡಿದ್ದರು.

ಕಳೆದ ಕೆಲ ತಿಂಗಳಿಂದ ಸಿಆರ್ ಪಿಎಫ್ ಯೋಧರು ನಡೆಯುತ್ತಿರುವ ನಕ್ಸಲ್ ವಿರುದ್ಧ ಕಾರ್ಯಾಚರಣೆಯನ್ನು ಗುರಿಯಾಗಿಸಿಕೊಂಡು ಸುಧಾರಿತ ತಂತ್ರಜ್ಞಾನದ ಸ್ಫೋಟಕ (ಐಇಡಿ) ಬಳಸಿ ದಾಳಿ ನಡೆಸಿದ್ದರು. ನಕ್ಸಲರು ಅಧಿಕ ಪ್ರಮಾಣದ ಸ್ಫೋಟಕವನ್ನು ಬಳಕೆ ಮಾಡಿ ಸ್ಫೋಟ ನಡೆಸಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಆರು ಯೋಧರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

ಕಳೆದ 11 ದಿನಗಳ ಹಿಂದೆ ಯೋಧರು ನಕ್ಸಲರು ವಿರುದ್ಧ ಕಾರ್ಯಾಚರಣೆ ನಡೆಸಿ 11 ಮಂದಿಯನ್ನು ಹತ್ಯೆ ಮಾಡಿದ್ದರು. ಇದಾದ ಬಳಿಕ ಯೋಧರ ಮೇಲೆ ದಾಳಿ ನಡೆಸಲಾಗಿದೆ.

ಕಳೆದ ಆರು ತಿಂಗಳಿನಿಂದ ಛತ್ತೀಸ್‍ಗಢದಲ್ಲಿ ಸುಮಾರು 25 ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಮೃತಪಟ್ಟಿದ್ದಾರೆ. ಅದರೂ ಯೋಧರು ನಕ್ಸಲರ್ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಯಶ್ವಸಿಯಾಗಿದ್ದು, ಸುಮಾರು 300 ಕ್ಕೂ ಹೆಚ್ಚು ನಕ್ಸಲರನ್ನು ಎನ್‍ಕೌಂಟರ್ ಮಾಡಲಾಗಿದೆ ಎಂದು ಗೃಹ ಸಚಿವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಸಾವನ್ನಪ್ಪಿದ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸಲ್ಲಿಸಿದ್ದು, ಕೆಚ್ಚೆದೆಯ ಯೋಧರಿಗೆ ದೇಶ ಸೆಲ್ಯೂಟ್ ಹೊಡೆಯುತ್ತಿದೆ. ಹುತಾತ್ಮ ಯೋಧರ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ದೇಶ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ ಎಂದು ಸಾಂತ್ವನ ಹೇಳಿ ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *