ಹಾಸನದಲ್ಲಿ ಸರ್ಕಾರದ ಹಣ ಪೋಲು – 150 ವರ್ಷದ ಹಿಂದಿನ ಕಟ್ಟಡದಲ್ಲಿದೆ ನ್ಯಾಯಾಲಯ

ಹಾಸನ: ನಗರದಲ್ಲಿ ಬೃಹತ್ ಹಾಗು ಸುಸಜ್ಜಿತ ನ್ಯಾಯಾಲಯದ ಕಟ್ಟಡ ನಿರ್ಮಾಣವಾಗಿದೆ. ಆದರೆ ಈ ಕಟ್ಟಡಕ್ಕೆ ಇನ್ನೂ ಉದ್ಘಾಟನಾ ಭಾಗ್ಯ ಸಿಗದ ಕಾರಣ 150 ವರ್ಷದ ಹಳೆಯ ಕಟ್ಟಡದಲ್ಲಿ ಈಗಲೂ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ.

ಸರ್ಕಾರ ಹಣ ಪೋಲು ಮಾಡುವುದು ಎಂದರೆ ಇದೇ ಇರಬೇಕು. ಯಾಕೆಂದರೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣ ಮಾಡಿ ವರ್ಷಗಳೇ ಕಳೆದರೂ ಸಹ ಇನ್ನೂ ಇದಕ್ಕೆ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ. ಇದು ಜಿಲ್ಲೆಯ ವಕೀಲರ ಆಕ್ರೋಶಕ್ಕೆ ಕಾರಣವಾಗಿದೆ.

ಮತ್ತೊಂದೆಡೆ ಪುರಾತನ ಕಾಲದ ಅಂದಾಜು 150 ವರ್ಷ ಹಳೆಯ ಬ್ರಿಟಿಷರ ಕಾಲದ ಕಟ್ಟಡದಲ್ಲಿ ಈಗಲೂ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ. ಸ್ವತಃ ಲೋಕೋಪಯೋಗಿ ಇಲಾಖೆಯೆ ಈ ಕಟ್ಟಡ ಅಪಾಯದಲ್ಲಿದೆ ಎನ್ನುವ ಬೋರ್ಡ್ ಹಾಕಿದ್ದರೂ ಕೂಡ ಅಲ್ಲಿಯೇ ಕಾರ್ಯನಿರ್ವಹಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದೆಡೆ ಸುಸಜ್ಜಿತವಾದ ನ್ಯಾಯಾಲಯದ ಕಟ್ಟಡವನ್ನು ಕಟ್ಟಿರುವ ಲೋಕೋಪಯೋಗಿ ಇಲಾಖೆ ಅದನ್ನು ನ್ಯಾಯಾಂಗ ಇಲಾಖೆಗೆ ಕೊಟ್ಟಿಲ್ಲ. ಮತ್ತೊಂದು ಕಡೆ ಅದೇ ಲೋಕೋಪಯೋಗಿ ಇಲಾಖೆ ಈ ಕಟ್ಟಡ ಅಪಾಯದಲ್ಲಿದೆ ಇಲ್ಲಿ ಇರಬೇಡಿ ಎಂದು ಎಚ್ಚರಿಕೆಯ ಫಲಕ ಹಾಕಿದೆ. ಇದು ಹೀಗೆ ಆದರೆ ನಾವು ಪ್ರತಿಭಟನೆಯ ಹಾದಿ ಹಿಡಿಬೇಕಾಗುತ್ತದೆ ಎಂದು ವಕೀಲರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *