ಹಾಸನ| ಗಣೇಶ ಮೆರವಣಿಗೆ ವೇಳೆ ಭೀಕರ ಅಪಘಾತ – ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

– ಘಟನಾ ಸ್ಥಳಕ್ಕೆ ಧಾವಿಸಿದ ಹೆಚ್‌ಡಿ ರೇವಣ್ಣ, ಸೂರಜ್‌, ನಿಖಿಲ್‌; ದುರಂತಕ್ಕೆ ಕೇಂದ್ರ ಸಚಿವ ಹೆಚ್‌ಡಿಕೆ ಸಂತಾಪ

ಹಾಸನ: ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ಸಾಗುತ್ತಿದ್ದವರ ಮೇಲೆ ಟ್ರಕ್‌ ಹರಿದು 8 ಮಂದಿ ದಾರುಣ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ದುರಂತಕ್ಕೆ ವಿಷಾದ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ ಅವರು ಮೃತರ ಕಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಸಿಎಂ ಟ್ವೀಟ್‌ನಲ್ಲಿ ಏನಿದೆ?
ಹಾಸನದಲ್ಲಿ ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದು ಹಲವರು ಸಾವಿಗೀಡಾಗಿ, ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಸುದ್ದಿ ತಿಳಿದು ಅತೀವ ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.

ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಇದು ಅತ್ಯಂತ ನೋವಿನ ಘಳಿಗೆ. ಅಪಘಾತ ಸಂತ್ರಸ್ತ ಕುಟುಂಬಗಳ ಜೊತೆ ನಾವೆಲ್ಲರೂ ನಿಲ್ಲೋಣ ಎಂದು ಸಿಎಂ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ದುರಂತ ಸಾವು ಕಂಡಿದ್ದಾರೆ. ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇವರು ವಿದ್ಯಾಭ್ಯಾಸ ಮಾಡುತ್ತಿದ್ದರು.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ. ಹಾಸನದಿಂದ ಹೊಳೆನರಸೀಪುರದ ಕಡೆಗೆ ಕಂಟೇನರ್ ವಾಹನ ಹೋಗುತ್ತಿತ್ತು. ಈ ವೇಳೆ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಮುಂದಾಗಿದ್ದಾನೆ. ಆದರೆ, ಬೈಕ್‌ಗೆ ಡಿಕ್ಕಿಯಾಗಿ ಮೆರವಣಿಗೆ ಹೋಗುತ್ತಿದ್ದವರ ಮೇಲೆ ವಾಹನ ನುಗ್ಗಿದೆ. ಬೈಕ್‌ ಸಾವರ ಕೂಡ ಮೃತಪಟ್ಟಿದ್ದಾನೆ.

ಚಾಲಕ ಭುವನೇಶ್‌ಗೂ ಗಂಭೀರ ಗಾಯಗಳಾಗಿವೆ. ಹೊಳೆನರಸೀಪುರ ತಾಲ್ಲೂಕಿನ ಕಟ್ಟೆಬೆಳಗುಲಿಯ ಚಾಲಕ ಭುವನೇಶ್‌ನನ್ನು ಹಾಸನದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಜೆಡಿಎಸ್‌ ನಾಯಕ ನಿಖಿಲ್‌ ಕುಮಾರಸ್ವಾಮಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ದುರಂತಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ.