ಹಾಸನ: ಹೆಣ್ಣು ಮಗು ಜನಿಸಿತು ಅಂತಾ ನವಜಾತ ಶಿಶುಗಳನ್ನು ಆಸ್ಪತ್ರೆ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಹಾಸನ ಜಿಲ್ಲೆಯಲ್ಲಿ ಗಂಡು ಕಂದಮ್ಮನನ್ನು ಬೀದಿ ಪಾಲು ಮಾಡಿದ ಅಮಾನವೀಯ ಘಟನೆ ನಡೆದಿದೆ.
ಕೆಲ ದುಷ್ಕರ್ಮಿಗಳು ಹಾಸನ ತಾಲೂಕು ಮಾವಿನಹಳ್ಳಿ ಬಳಿ ಇಂದು ಬೆಳಗ್ಗೆ ನವಜಾತ ಗಂಡು ಶಿಶುವನ್ನು ಬಿಟ್ಟು ಹೋಗಿದ್ದಾರೆ. ಮಗುವಿನ ಹೊಕ್ಕಳು ಬಳ್ಳಿಯನ್ನು ಕೂಡ ಕತ್ತರಿಸಿಲ್ಲ. ಆಗತಾನೆ ಜನಿಸಿದ ಕರುಳ ಕುಡಿಯನ್ನು ಅಮ್ಮ ಎಸೆದು ಹೋಗಿದ್ದಾಳೆ. ರಾತ್ರಿ ಮಗು ಚಳಿಯಲ್ಲಿ ನರಳಾಡಿ, ಅಳಲು ಆರಂಭಿಸಿದೆ. ಇದನ್ನು ಓದಿ: ನವಜಾತ ಶಿಶುವನ್ನು ಬ್ಯಾಗ್ ನಲ್ಲಿ ತುಂಬಿ ಬಾತ್ರೂಂನಲ್ಲೇ ಇಟ್ಟೋದ್ಳು!
ಅದೃಷ್ಟವಶಾತ್ ಮಗು ನಾಯಿ ಬಾಯಿ ಸಿಕ್ಕಿಕೊಳ್ಳದೇ ಬದುಕುಳಿದಿದೆ. ಇತ್ತ ಮಗು ಅಳುತ್ತಿರುವ ಧ್ವನಿ ಕೇಳಿಸಿಕೊಂಡ ಕೆಲ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ, ಅನಾಥ ಶಿಶುವನ್ನು ಹಾಸನ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಮಗುವಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೇ ಇಂತಹ ಹೀನ ಕೃತ್ಯ ಎಸಗಿದ್ದಾಳೆ ಎನ್ನುವ ಶಂಕೆ ವ್ಯಕ್ತವಾಗಿದೆ. ಮಗುವಿನ ಪರಿಸ್ಥಿತಿ ಕಂಡು ಗ್ರಾಮಸ್ಥರು ಮರುಕ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ಚರಂಡಿಯಲ್ಲಿ ಸಿಕ್ಕ ನವಜಾತ ಶಿಶುವಿಗೆ ‘ಸ್ವಾತಂತ್ರ್ಯ’ ಅಂತ ನಾಮಕರಣ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply