ಗಾಯಕಿ ಮೇಲೆ 6 ಬಾರಿ ಗುಂಡು ಹಾರಿಸಿ ಹತ್ಯೆ

ಚಂಡೀಗಢ: ಹರಿಯಾಣದ ಗಾಯಕಿಯೊಬ್ಬರು ಪಾಣಿಪತ್‍ನಿಂದ ದೆಹಲಿಗೆ ಬರುವ ವೇಳೆ ಆಕೆಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

22 ವರ್ಷದ ಹರ್ಷಿತಾ ದಹಿಯಾ ಗುಂಡಿನ ದಾಳಿಗೆ ಬಲಿಯಾದ ಗಾಯಕಿ. ಹರ್ಷಿತಾ ಮೇಲೆ 6 ಬಾರಿ ಕತ್ತಿಗೆ ಹಾಗೂ ಹಣೆಗೆ ಗುಂಡು ಹಾರಿಸಲಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ಹರಿಯಾಣದ ಪಾಣಿಪತ್‍ನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ದೆಹಲಿಯ ನರೇಲಾದಲ್ಲಿನ ಮನೆಗೆ ಹಿಂದಿರುಗುವಾಗ ಯುವತಿ ಮೇಲೆ ಗುಂಡಿನ ದಾಳಿ ನಡೆದಿದೆ. ಮಂಗಳವಾರ ಸಂಜೆ 4 ಗಂಟೆ ವೇಳೆಯಲ್ಲಿ ಯುವತಿಯ ಕಾರನ್ನು ಇಬ್ಬರು ವ್ಯಕ್ತಿಗಳು ಓವರ್ ಟೇಕ್ ಮಾಡಿ ಚಾಮರಾರಾ ಗ್ರಾಮದ ಬಳಿ ಅಡ್ಡಗಟ್ಟಿದ್ರು ಎಂದು ಹಿರಿಯ ಪೊಲೀಸ್ ಅಧಿಕಾರಿ ದೇಶ್ ರಾಜ್ ಹೇಳಿದ್ದಾರೆ.

ಕಾರನ್ನು ಓವರ್ ಟೇಕ್ ಮಾಡಿದ ಬಳಿಕ ಇಬ್ಬರು ಅಪರಿಚಿತ ವ್ಯಕ್ತಿಗಳು ಹರ್ಷಿತಾ ಅವರ ಇಬ್ಬರು ಸಹಾಯಕರು ಹಾಗೂ ಕಾರು ಚಾಲಕನನ್ನು ಕಾರಿನಿಂದ ಕೆಳಗಿಳಿಯುವಂತೆ ಹೇಳಿದ್ರು. ನಂತರ ಹರ್ಷಿತಾ ಕಾರಿನೊಳಗೆ ಇದ್ದಾಗಲೇ ಆಕೆಯ ಮೇಲೆ 7 ಸುತ್ತು ಗುಂಡು ಹಾರಿಸಿದ್ದಾರೆ. 6 ಗುಂಡುಗಳು ಆಕೆಯ ತಲೆ ಹಾಗೂ ಕುತ್ತಿಗೆಯ ಭಾಗಕ್ಕೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. ದಾಳಿಯ ಬಳಿಕ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಹರ್ಷಿತಾ ದಹಿಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮೊಬೈಲ್ ವಿಡಿಯೋವೊಂದನ್ನ ಹಾಕಿದ್ದರು. ನನಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಆದ್ರೆ ಅದಕ್ಕೆಲ್ಲಾ ನಾನು ಹೆದರಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದರು. ಆದ್ರೆ ಜೀವಬೆದರಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರಾ ಇಲ್ಲವಾ ಎಂಬ ಬಗ್ಗೆ ಮಾಹಿತಿ ಸಿಕಿಲ್ಲ ಎಂದು ವರದಿಯಾಗಿದೆ.

ಸದ್ಯಕ್ಕೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರ್ಷಿತಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಾಣಿಪತ್ ಆಸ್ಪತ್ರೆಗೆ ಕಳಿಸಲಾಗಿದೆ.

Comments

Leave a Reply

Your email address will not be published. Required fields are marked *