ಹರಿಯಾಣದಲ್ಲಿ ನಿಲ್ಲದ ಕೋಮು ಘರ್ಷಣೆ – ನಾಲ್ವರು ಸಾವು; 30 ಕ್ಕೂ ಹೆಚ್ಚು ಮಂದಿಗೆ ಗಾಯ

ಚಂಡೀಗಢ: ಧಾರ್ಮಿಕ ಮೆರವಣಿಗೆ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಮತ್ತಷ್ಟು ಉಲ್ಬಣಗೊಂಡಿದೆ. ಹಿಂಸಾಚಾರದಲ್ಲಿ ಇಬ್ಬರು ಗೃಹ ರಕ್ಷಕರು ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದು, 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗುರುಗ್ರಾಮ್‌ಗೆ ಹೊಂದಿಕೊಂಡಿರುವ ಹರಿಯಾಣದ (Haryana Clash) ನುಹ್‌ನಲ್ಲಿ ನಡೆದ ಧಾರ್ಮಿಕ ಮೆರವಣಿಗೆ ವೇಳೆ ಘರ್ಷಣೆ ಸೃಷ್ಟಿಯಾಯಿತು. ನುಹ್‌ನ ಖೇಡ್ಲಾ ಮೋಡ್‌ನಲ್ಲಿ ಧಾರ್ಮಿಕ ಮೆರವಣಿಗೆ ತಡೆಯಲು ಗುಂಪೊಂದು ಕಲ್ಲುಗಳನ್ನು ಎಸೆದಿತ್ತು. ಅಲ್ಲದೇ ಕಾರುಗಳಿಗೆ ಬೆಂಕಿ ಹಚ್ಚಿದ ಕಾರಣ ಹೋಮ್ ಗಾರ್ಡ್‌ಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವ ಹಿಂದೂ ಪರಿಷತ್‌ ಮೆರವಣಿಗೆ ಮೇಲೆ ಕಲ್ಲು ತೂರಾಟ – ಹರಿಯಾಣದಲ್ಲಿ ಹಿಂಸಾಚಾರ, ಇಬ್ಬರು ಸಾವು

ಹಿಂಸಾಚಾರವು ನೆರೆಯ ಜಿಲ್ಲೆಗೆ ಹರಡಿತ್ತು. ಗುರುಗ್ರಾಮ್‌ನ ಮಸೀದಿಯೊಂದರ ಮೇಲೆ ಗುಂಪೊಂದು ದಾಳಿ ಮಾಡಿದ ವೇಳೆ ನಿನ್ನೆ ತಡರಾತ್ರಿ 26 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಆದರೆ ಹಿಂಸಾಚಾರದಲ್ಲಿ ಸಾವನ್ನಪ್ಪಿದ ನಾಲ್ಕನೇ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.

ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಆಯೋಜಿಸಿದ್ದ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯನ್ನು ಗುರುಗ್ರಾಮ್-ಆಳ್ವಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ಗುಂಪೊಂದು ತಡೆದಿತ್ತು. ಈ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಹಿಂಸಾಚಾರ ಉಲ್ಬಣಗೊಳ್ಳುತ್ತಿದ್ದಂತೆ ಸರ್ಕಾರಿ ಮತ್ತು ಖಾಸಗಿ ವಾಹನಗಳ ಮೇಲೆ ಗುಂಪು ದಾಳಿ ನಡೆಸಿತು. ನಿನ್ನೆ ಸಂಜೆಯ ಹೊತ್ತಿಗೆ, ಹಿಂಸಾಚಾರವು ಗುರುಗ್ರಾಮ್-ಸೋಹ್ನಾ ಹೆದ್ದಾರಿ ವರೆಗೆ ಹರಡಿತು. ಅಲ್ಲಿ ಹಲವಾರು ಕಾರುಗಳಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇ ನಿರ್ಮಾಣದ ವೇಳೆ ಕ್ರೇನ್ ಕುಸಿದು 16 ಮಂದಿ ಕಾರ್ಮಿಕರು ದುರ್ಮರಣ

ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ನೂಹ್‌ಗೆ ಬಂದಿದ್ದ ಸುಮಾರು 2,500 ಜನರು ಹೊರಗಿನ ಹಿಂಸಾಚಾರದಿಂದಾಗಿ ದೇವಸ್ಥಾನದಲ್ಲಿ ಸಿಲುಕಿಕೊಂಡರು. ಸಂಜೆಯ ನಂತರ ಪೊಲೀಸರು ಅವರನ್ನು ರಕ್ಷಿಸಿದರು. ಪಲ್ವಾಲ್ ಮತ್ತು ಗುರುಗ್ರಾಮ್ ಭಾಗಗಳಲ್ಲಿ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಹಿಂಸಾಚಾರ ಮತ್ತಷ್ಟು ಹೆಚ್ಚಾಗುವುದನ್ನು ತಡೆಯಲು ನುಹ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಗುರುಗ್ರಾಮ್, ಪಲ್ವಾಲ್ ಮತ್ತು ಫರಿದಾಬಾದ್‌ನಲ್ಲಿಯೂ ದೊಡ್ಡ ಸಭೆಗಳನ್ನು ಆಯೋಜಿಸುವುದಕ್ಕೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಕೋಮುಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಸುಮಾರು 20 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 20ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಅವರು ಗಲಭೆಕೋರರನ್ನು ಗುರುತಿಸಲು ಭದ್ರತಾ ಕ್ಯಾಮೆರಾಗಳಿಂದ ದೃಶ್ಯಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ. ತೀವ್ರವಾದ ಕೋಮು ಉದ್ವಿಗ್ನತೆ ಸೃಷ್ಟಿಯಾಗದಂತೆ ಎಚ್ಚರವಹಿಸಲು, ತಪ್ಪು ಮಾಹಿತಿ ಮತ್ತು ವದಂತಿ ಹರಡುವಿಕೆ ತಡೆಯಲು ನಾಳೆಯವರೆಗೆ ನುಹ್‌ನಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುಗ್ರಾಮ್ ಮತ್ತು ಫರಿದಾಬಾದ್ ಜಿಲ್ಲೆಗಳಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಇಂದು ರಜೆ ನೀಡಲಾಗಿದೆ. ಇದನ್ನೂ ಓದಿ: ತರಕಾರಿ ಬೆಲೆ ಏರಿಕೆ – ಆಜಾದ್‌ಪುರ ಮಂಡಿ ತರಕಾರಿ ಮಾರುಕಟ್ಟೆಗೆ ರಾಗಾ ಭೇಟಿ

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಇತರ ನಾಯಕರು ಶಾಂತಿ-ಸೌಹಾರ್ದತೆಯನ್ನು ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ. ಇಂದಿನ ಘಟನೆ ದುರದೃಷ್ಟಕರವಾಗಿದೆ. ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ನಾನು ಎಲ್ಲ ಜನರಿಗೆ ಮನವಿ ಮಾಡುತ್ತೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ತಿಳಿಸಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]