ಗ್ಯಾಂಗ್ ರೇಪ್- ಪ್ರಮುಖ ಆರೋಪಿ ಓರ್ವ ರಕ್ಷಣಾ ಸಿಬ್ಬಂದಿ!

ಚಂಡೀಗಡ: ರಾಷ್ಟ್ರಪತಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದ ಸಿಬಿಎಸ್‍ಇ ಟಾಪರ್ ಅಪಹರಣ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರಾಜಸ್ಥಾನದ ಓರ್ವ ರಕ್ಷಣಾ ಸಿಬ್ಬಂದಿ ಅಂತ ವಿಶೇಷ ತನಿಖಾ ತಂಡ(ಎಸ್‍ಐಟಿ) ಗುರುತಿಸಿದೆ.

ಘಟನೆಯ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಸದ್ಯ ಅವರಿಗಾಗಿ ವಿಶೇಷ ತನಿಖಾ ತಂಡಗಳನ್ನು ರಚಿಸಿ, ಬಲೆ ಬೀಸಲಾಗಿದೆ ಅಂತ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಎಸ್‍ಐಟಿ ಮುಖ್ಯಸ್ಥೆ ನಾಝ್ ನೀನ್ ಭಾಸಿನ್ ಹೇಳಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ರಾಜಸ್ಥಾನದಲ್ಲಿ ರಕ್ಷಣಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಸದ್ಯ ಈತನ ವಿರುದ್ಧ ವಾರಂಟ್ ಜಾರಿ ಮಾಡಿದ್ದೇವೆ. ಹಾಗೂ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಕೂಡ ಶೀಘ್ರವೇ ಬಂಧಿಸಲಾಗುವುದು ಅಂತ ಹರ್ಯಾಣ ಡಿಜಿಪಿ ಬಿಎಸ್ ಸಂಧು ತಿಳಿಸಿದ್ದಾರೆ.

ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ರಿವಾರಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್‍ಐಟಿ ತಂಡ ಆಸ್ಪತ್ರೆಗೆ ಭೇಟಿ ನೀಡಿ ಆಕೆಯ ಆರೋಗ್ಯ ವಿಚಾರಿಸಿದೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಾಝ್ ನೀನ್, ಇಂದು ನಾನು ಸಂತ್ರಸ್ತೆ ಜೊತೆ ಮಾತನಾಡಿದ್ದೇನೆ. ಸದ್ಯ ಆಕೆಯ ಸ್ಥಿತಿ ಸ್ಥಿರವಾಗಿದೆ. ಪ್ರಕರಣದ ಪ್ರಮುಖ ಆರೋಪಿಯನ್ನು ಗುರುತಿಸಿದ್ದು, ಈ ಸಂಬಂಧ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಘಟನೆಯ ಬಳಿಕ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗಾಗಿ ಪೊಲೀಸರು ರಿವಾರಿ ಹಾಗೂ ಮಹೇಂದ್ರಗಡ ಜಿಲ್ಲೆಯಲ್ಲಿ ಶೋಧ ನಡೆಸುತ್ತಿದ್ದಾರೆ.

ನನ್ನ ಮಗಳ ಮೇಲೆ 8ರಿಂದ 10 ಮಂದಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ ಅಂತ ವಿದ್ಯಾರ್ಥಿನಿಯ ತಂದೆ ಆರೋಪಿಸುತ್ತಿದ್ದಾರೆ. ಆದ್ರೆ ಸಂತ್ರಸ್ತೆ ಸದ್ಯ ಮೂವರ ಬಗ್ಗೆ ಮಾತ್ರ ಪೊಲೀಸರ ಬಳಿ ಹೇಳಿದ್ದಾಳೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ತನಿಖೆ ಚುರುಕುಗೊಳಿಸಿದೆ.

ಏನಿದು ಘಟನೆ?:
ಹರಿಯಾಣದ ಮಹೇಂದ್ರಗಢ ಎಂಬಲ್ಲಿ ಸಿಬಿಎಸ್‍ಎ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿ, ರಾಷ್ಟ್ರಪತಿಯವರಿಂದ ಬಹುಮಾನ ಸ್ವೀಕರಿಸಿದ್ದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಬಳಿಕ ಅತ್ಯಾಚಾರವೆಸಗಿರುವ ಘಟನೆ ಬುಧವಾರ ನಡೆದಿತ್ತು. ಸಂತ್ರಸ್ತೆ 12ನೇ ತರಗತಿಯಲ್ಲಿ ಓದುತ್ತಿದ್ದಳು. ಈಕೆ ರಿವಾರಿಯಲ್ಲಿಯಲ್ಲಿರೋ ತನ್ನ ಗ್ರಾಮಕ್ಕೆ ಕೋಚಿಂಗ್ ಗೆಂದು ತೆರಳುತ್ತಿದ್ದಳು. ಈ ವೇಳೆ 3 ಮಂದಿ ಯುವಕರ ಗುಂಪೊಂದು ಕಾರಿನಲ್ಲಿ ಬಂದು ಆಕೆಯನ್ನು ಅಡ್ಡಹಾಕಿತ್ತು. ಅಲ್ಲದೇ ಬಳಿಕ ವಿದ್ಯಾರ್ಥಿನಿಯನ್ನು ತಮ್ಮ ಕಾರಿನೊಳಗೆ ಎಳೆದು ಹಾಕಿದ್ದಾರೆ. ಹೀಗೆ ಅಪಹರಣ ಮಾಡಿದ ಬಳಿಕ ಕಾರಿನಲ್ಲಿಯೇ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು ಅಂತ ವರದಿಯಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *